ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡಿರುವ 11 ಶಾಲೆಗಳನ್ನು ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಾ ಯೋಜನೆಯಡಿ 2023-24 ಹಾಗೂ 2024-25ನೇ ಸಾಲಿನಲ್ಲಿ ದುರಸ್ತಿಗೊಳಿಸುವುದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ತಿಳಿಸಿದ್ದಾರೆ. ಲೋಕಸಭೆಯಲ್ಲಿ
ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಸಮಗ್ರ ಶಿಕ್ಷಾ ಯೋಜನೆಡಿ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆ ಆದ್ಯತೆಯಾಗಿ ಶಾಲೆಗಳನ್ನು ದುರಸ್ತಿಗೊಳಿಸುವ ಕಾರ್ಯ ನಡೆಯುತ್ತಿದೆ. ಪ್ರಬಂಧ್ ಪೋರ್ಟಲ್ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಶಿಕ್ಷಾ ಯೋಜನೆಯಡಿ ಕಳೆದ ಎರಡು ಸಾಲಿನಲ್ಲಿ 11 ಶಾಲೆಗಳನ್ನು ದುರಸ್ತಿಗೊಳಿಸಲು ಅನುಮೋದನೆ ನೀಡಲಾಗಿದೆ. ಕೇಂದ್ರದ ಈ ಸಮಗ್ರ ಶಿಕ್ಷಾ ಯೋಜನೆಯು ರಿಪೇರಿಗೆ ಕಾಯುತ್ತಿರುವ ಶಾಲೆಗಳನ್ನು ಆದ್ಯತೆ ಮೇರೆಗೆ ದುರಸ್ತಿಗೊಳಿಸುವುದಕ್ಕೆ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ಆ ಮೂಲಕ, ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾಗುವ ಶಾಲೆಗಳನ್ನು ಯಥಾಸ್ಥಿತಿಗೆ ತರುವುದಕ್ಕೆ ಕೇಂದ್ರ ಸರ್ಕಾರದ ಸೂಕ್ತ ಆರ್ಥಿಕ ನೆರವು ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಮಳೆ ಪೀಡಿತ ಪ್ರದೇಶಗಳ ಶಾಲೆಗಳನ್ನು ತುರ್ತಾಗಿ ದುರಸ್ತಿಗೊಳಿಸಿ ಅವುಗಳಿಗೆ ಸೂಕ್ತ ಮೂಲಸೌಕರ್ಯ ಮರುಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(NDMA)ದ ಸಮನ್ವಯದಲ್ಲಿ ಪ್ರತ್ಯೇಕ ಮಾರ್ಗಸೂಚಿ ಹಾಗೂ ಸಲಹೆಗಳನ್ನು ಬಿಡುಗಡೆಗೊಳಿಸಿದೆ. ಈ ನಡುವೆ ಕೇಂದ್ರ ಸರ್ಕಾರವು ನೈಸರ್ಗಿಕ ವಿಪತ್ತು ನಿರ್ವಹಣಾ ನಿಧಿಯಡಿ ದಕ್ಷಿಣ ಕನ್ನಡದಲ್ಲಿ 2024-25ನೇ ಸಾಲಿನಲ್ಲಿ 240 ಹಾಗೂ ರಾಜ್ಯ ಸರ್ಕಾರದ ನಿಧಿಯಡಿ 312 ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ಕೈಗೊಂಡಿರುವುದಾಗಿ ಸಚಿವ ಚೌಧರಿ ವಿವರಿಸಿದರು.
ಸಂಸತ್ತಿನ ಮುಂಗಾರು ಅಧಿವೇಶನದಳ್ಇ ಸಂಸದ ಕ್ಯಾ. ಚೌಟ ಅವರು ದಕ್ಷಿಣ ಕನ್ನಡದಲ್ಲಿ ಅತಿವೃಷ್ಟಿಗೆ 290ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಹಾನಿಯಾಗಿದ್ದು, ಅವುಗಳ ದುರಸ್ತಿ ಕಾರ್ಯಕ್ಕೆ ತುರ್ತಾಗಿ ಕೇಂದ್ರ ಸರ್ಕಾರದ ನೆರವು ಕೋರಿದ್ದರು.





