ಮಂಗಳೂರು: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೂತನ ಕಚೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ಶುಕ್ರವಾರ ಶುಭಾರಂಭಗೊಂಡಿತು.ಆರ್ಎಸ್ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಚೇರಿ ಉದ್ಘಾಟಿಸಿದರು. ಚೌಟ ಅವರು ಕ್ಷೇತ್ರದ ಪ್ರತಿನಿಧಿಯಾಗಿ ಸಂಸತ್ನಲ್ಲಿ ಧ್ವನಿ ಎತ್ತಲಿದ್ದಾರೆ. ಎಲ್ಲರ ಸಮಸ್ಯೆಗಳನ್ನು
ಆಲಿಸಿ, ಅದಕ್ಕೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ನೂತನ ಕಚೇರಿ ಕೆಲಸ ಮಾಡಲಿ. ಪ್ರಾಮಾಣಿಕವಾಗಿ ಯೋಧನ ಹಾಗೆ ಸಮರ್ಪಣಾ ಭಾವದಿಂದ ಬ್ರಿಜೇಶ್ ಚೌಟ ಅವರು ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ನೂತನ ಕಚೇರಿ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಲಾಗುವುದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ, ಅವಕಾಶ ಕಲ್ಪಿಸುವ ಕೆಲಸವನ್ನು ಪಕ್ಷ ಮಾಡಿಕೊಂಡು ಬಂದಿದೆ. ಅದನ್ನೇ ನಾನು ಮುಂದುವರೆಸುತ್ತೇನೆ ಎಂದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಪ್ರತಾಪ ಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಮಾಜಿ ಶಾಸಕರಾದ ಯೋಗೀಶ್ ಭಟ್, ಮಲ್ಲಿಕಾ ಪ್ರಸಾದ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಾಲಕೃಷ್ಣ ಭಟ್, ಮೋನಪ್ಪ ಭಂಡಾರಿ, ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಮೇಯರ್ಗಳಾದ ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ, ಜಯಾನಂದ ಅಂಚನ್, ಪಕ್ಷದ ಪದಾಧಿಕಾರಿಗಳು, ಮನಪಾ ಸದಸ್ಯರು, ಕಾರ್ಯಕರ್ತರು ಶುಭ ಹಾರೈಸಿದರು.