ಸುಬ್ರಹ್ಮಣ್ಯ: ಈ ಬಾರಿ ಕರ್ನಾಟಕದಲ್ಲಿ ಅಚ್ಚರಿಯ ಫಲಿತಾಂಶ ಲಭಿಸಲಿದ್ದು, ರಾಜ್ಯದ 20 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಆರೋಗ್ಯ ಸಚಿವ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ಗುಂಡೂರಾವ್ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯ ಭದ್ರಕೋಟೆ ಎಂಬಿತ್ಯಾದಿ ಹೇಳುತ್ತಿದ್ದ ದ.ಕ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ
ಕಾಂಗ್ರೆಸ್ಗೆ ಗೆಲುವಿನ ವಾತಾವರಣ ಕಂಡು ಬರುತ್ತಿದೆ.ಈ ಭಾಗದಲ್ಲಿ ಬಿಜೆಪಿ ಗೆಲುತ್ತದೆ ಎಂಬ ಗ್ಯಾರಂಟಿ ಇಲ್ಲ. ಇದು ರಾಜ್ಯದಲ್ಲಿ ಆದ ಬದಲಾವಣೆಯನ್ನು ತೋರಿಸುತ್ತದೆ. ಇಡೀ ದೇಶದಲ್ಲಿ ಬದಲಾವಣೆ ತರಬೇಕು ಎಂದು ಜನ ಬಯಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ನ ಮೇಲೆ ಜನತೆಗೆ ಇದ್ದ ಒಲವು ಹೆಚ್ಚು ಹೆಚ್ಚು ಗೋಚರವಾಗುತ್ತಿದೆ. ಮೊದಲನೇ ಹಂತದ ಚುನಾವಣೆ ನಡೆದ ನಂತರ ಜನತೆಯ ಭಾವನೆಗಳು ಕಾಂಗ್ರೆಸ್ ಪರವಾಗಿರುವುದು ಕಂಡು ಬಂದಿದೆ.ನಮಗೆ ಬಂದ ಮಾಹಿತಿ ಪ್ರಕಾರ ಮೊದಲ ಹಂತದ ಚುನಾವಣೆಯಲ್ಲಿ ನಮ್ಮ ಒಕ್ಕೂಟ ಮುನ್ನಡೆ ಸಾಸಿದೆ ಎಂದು ನುಡಿದರು.
ಈ ಬಾರಿ ಕರ್ನಾಟಕದಾದ್ಯಂತ ಕಾಂಗ್ರೆಸ್ಗೆ ಒಳ್ಳೆಯ ವಾತಾವರಣ ಇದೆ. ಅದೇ ರೀತಿ ದ.ಕ ಜಿಲ್ಲೆಯಲ್ಲೂ ಕೂಡಾ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ.ಬಿಜೆಪಿ ಬಗ್ಗೆ ಆದ ಭ್ರಮನಿರಸನ ಹಾಗೇನೆ ರಾಜ್ಯದ ಕಾಂಗ್ರೆಸ್ ಸರಕಾರ ಮಾಡಿದ ಉತ್ತಮ ಕೆಲಸದ ಬಗ್ಗೆ ಜನತೆ ಅರಿತು ಕಾಂಗ್ರೆಸ್ ಪಕ್ಷವನ್ನು ಹೆಚ್ಚಾಗಿ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಸರಕಾರವು ಹೇಳಿದ ಐದು ಗ್ಯಾರಂಟಿಗಳನ್ನು ಕೇವಲ 8 ತಿಂಗಳಲ್ಲಿ ಅನುಷ್ಠಾನ ಮಾಡಿದೆ. ಈ ಬಗ್ಗೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ ಸರಕಾರವು ತಾನು ನುಡಿದಂತೆ ನಡೆದು ರಾಜ್ಯದ ಜನತೆಯ ಹಿತ ಕಾಪಾಡಿದೆ.ಮುಂದಿನ 4 ವರ್ಷಕೂಡಾ ನಮ್ಮ ಗ್ಯಾರಂಟಿಗಳು ಜನತೆಗೆ ಲಭಿಸಲಿದೆ. ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಗೂ ಮುಟ್ಟಿದೆ. ಜಾತ್ಯಾತೀತ, ಧರ್ಮಾತೀತ, ಪಕ್ಷಾತೀತವಾದ ಕಾರ್ಯಕ್ರಮ ಎಲ್ಲರಿಗೂ ಮುಟ್ಟಿದೆ. ಆದುದರಿಂದ ಜನತೆ ನಮ್ಮ ಪಕ್ಷದತ್ತ ಒಲವು ತೋರಿಸುತ್ತಿದ್ದಾರೆ. ಬಿಜೆಪಿಯವರು ತಾವು ನೀಡಿದ ಯಾವುದೇ ಮಾತನ್ನು ಉಳಿಸಿಕೊಂಡಿಲ್ಲ.ಆದರೆ ನಾವು ನುಡಿದಂತೆ ನಡೆದಿದ್ದೇವೆ ಜನತೆಗೆ 5 ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದರು.
ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎನ್ನುವುದು ನ್ಯಾಯಾಲಯ ನೀಡಿದ ತೀರ್ಪು ಸಾಕ್ಷಿಯಾಗಿದೆ. ಕಾನೂನಾತ್ಮಕವಾಗಿ ರಾಜ್ಯಕ್ಕೆ ಬರಬೇಕಿದ್ದ ಪರಿಹಾರದ ಮೊತ್ತವನ್ನು ಸುಪ್ರೀಂಕೋರ್ಟ್ಗೆ ಹೋಗಿ ತರುವಂತ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ. ರಾಜ್ಯದ ಬಿಜೆಪಿ ನಾಯಕರು ರಾಜ್ಯಕ್ಕೆ ಬರಪರಿಹಾರ ನೀಡಬೇಕು ಎಂಬ ಒತ್ತಡವನ್ನು ಹಾಕದೆ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ದೂರಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್, ಗೇರು ನಿಗಮದ ಅಧ್ಯಕ್ಷೆ ಮಮತಾಗಟ್ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ಕುಮಾರ್ ಶೆಟ್ಟಿ, ಮಾಜಿ ವಿಧಾನ ಸಭಾ ಚುನಾವಣೆಯ ಅಭ್ಯರ್ಥಿ ಜಿ.ಕೃಷ್ಣಪ್ಪ ತಾ.ಪಂ.ಸದಸ್ಯಅಶೋಕ್ ನೆಕ್ರಾಜೆ, ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಮುಖಂಡರಾದ ಎಂ. ವೆಂಕಪ್ಪ ಗೌಡ, , ಪವನ್ಎಂ.ಡಿ, ಕಿರಣ್ ಬುಡ್ಲೆಗುತ್ತು, ಶಿವರಾಮ ರೈ, ಬಾಲಕೃಷ್ಣ ಬಲ್ಲೇರಿ, ಸರಸ್ವತಿ ಕಾಮತ್, ಪ್ರಮೋದ್ ಕಳಿಗೆ, ಎ.ಸುಬ್ರಹ್ಮಣ್ಯರಾವ್, ರವೀಂದ್ರಕುಮಾರ್ ರುದ್ರಪಾದ ಮೊದಲಾದವರು ಉಪಸ್ಥಿತರಿದ್ದರು. ಹಲವು ಮಂದಿ ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಸ್ನಿಂದ ಕಾಂಗ್ರೆಸ್ ಸೇರ್ಪಡೆಯಾದರು.