ಮಂಗಳೂರು:ಪ್ರಕೃತಿ ವಿಕೋಪದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ನಿಗಾವಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಇಂದು ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಕುಡಿಯುವ ನೀರು ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಉದ್ದೇಶಿಸಿ ಮಾತನಾಡಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯ ಕಾರಣದಿಂದಾಗಿ ಯಾವುದೇ ಸಮಸ್ಯೆಗಳು ಉಂಟಾದಲ್ಲಿ
ಮೆಸ್ಕಾಂ ಇಲಾಖೆಯು ತ್ವರಿತವಾಗಿ ಕಾರ್ಯ ಪ್ರವೃತ್ತರಾಗಬೇಕು. ವಿದ್ಯುತ್ ಸಮಸ್ಯೆಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ತಂತಿಗಳ ಹಾನಿಯಿಂದ ಸಂಪರ್ಕ ಕಡಿತ ಉಂಟಾಗಬಹುದು ಇಂತಹ ಸಮಸ್ಯೆಗಳನ್ನು ಎದುರಿಸಲು ಮೆಸ್ಕಾಂ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಗಳನ್ನು ನಿಯೋಜಿಸಬೇಕು ಹಾಗೂ ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ಮೊದಲೇ ಕೈಗೊಂಡಿರಬೇಕು, ವಿದ್ಯುತ್ ಸಮಸ್ಯೆ ಉಂಟಾದ 6 ಗಂಟೆಯ ಒಳಗೆ ಪರಿಹಾರ ಒದಗಿಸಬೇಕು, ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕಂಟ್ರೋಲ್ರೂಮ್ ಗಳನ್ನು ತೆರೆಯಬೇಕು, ಮಲೆನಾಡು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಹೆಚ್ಚಿನ ಗಮನಹರಿಸಿ ತಕ್ಷಣ ಸರಿಪಡಿಸಿ ಅಗತ್ಯ ಕ್ರಮವಹಿಸಿ ಎಂದರು.
ಕುಡಿಯುವ ನೀರಿನ ಬಗ್ಗೆ ಮಾತನಾಡಿದ ಅವರು ಈಗಾಗಲೇ ಕೆಲವು ಕಡೆಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಅನಾವಶ್ಯಕ ಉದ್ದೇಶಗಳಿಗೆ ನೀರು ಪೋಲಾಗುವುದನ್ನು ತಪ್ಪಿಸಲು ಕ್ರಮವಹಿಸಿ ಅಂತವರ ವಿರುದ್ಧ ದಂಡ ವಿಧಿಸಬೇಕು, ಟ್ಯಾಂಕರುಗಳಿಂದ ಸರಬರಾಜಾಗುತ್ತಿರುವ ನೀರು ಹಾಗೂ ನೀರಿನ ಮೂಲಗಳು ಶುದ್ಧವಾಗಿದೆ ಎಂಬುದನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿಸಲು ಕ್ರಮ ತೆಗೆದುಕೊಳ್ಳುವಂತೆ ಹೇಳಿದರು.
ಮುಂಗಾರು ಪೂರ್ವದಲ್ಲಿಯೇ ಡಂಪಿಂಗ್ ಯಾರ್ಡ್, ಕಸ ವಿಲೇವಾರಿ ಪ್ರದೇಶಗಳನ್ನು ಸ್ವಚ್ಛಗೊಳಿಸಬೇಕು, ಇಂತಹ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗದಂತೆ ಮುಂಜಾಗ್ರತ ಕ್ರಮ ವಹಿಸಬೇಕು ಅಧಿಕಾರಿಗಳು ಕೂಡಲೇ ಅಂತಹ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆರೋಗ್ಯ ಇಲಾಖೆಯು ಮಳೆಯ ಸಂದರ್ಭದಲ್ಲಿ ಬರುವ ಡೆಂಗ್ಯೂ ಮಲೇರಿಯಾ ಮುಂತಾದ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದರ ಜೊತೆಗೆ ಮಳೆಯಿಂದ ಹಾನಿ ಪ್ರದೇಶದಲ್ಲಿ ತಮ್ಮ ಚಿಕಿತ್ಸೆಯನ್ನು ಒದಗಿಸಲು ನಿಗಾವಹಿಸುವಂತೆ ಹೇಳಿದರು.
ಅರಣ್ಯ ಇಲಾಖೆ ಮತ್ತು ಅಗ್ನಿಶಾಮಾಕ ದಳದವರು ಜಂಟಿಯಾಗಿ ಮಾತುಕತೆ ನಡೆಸಿ ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲಿ ಉಂಟಾಗುವ ಅಪಾಯವನ್ನು ತಡೆಯಲು ಕೂಡಲೇ ರೆಂಬೆಕೊಂಬೆಗಳನ್ನು ಕತ್ತರಿಸಬೇಕು ಎಂದರು.
ಮರ ಬಿದ್ದು ರಸ್ತೆ ಬ್ಲಾಕ್ ಆದ ಸಂದರ್ಭದಲ್ಲಿ ಕೂಡಲೇ ಬದಲಿ ರಸ್ತೆಯ ವ್ಯವಸ್ಥೆಯನ್ನು ಮಾಡಬೇಕು, ಹಾಗೂ ಬ್ಯಾರಿಕೇಡ್ಗಳನ್ನು ಅಳವಡಿಸುವ ಮೂಲಕ ಸಂಚಾರವಾಗದಂತೆ ನಿಯಂತ್ರಿಸಬೇಕು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಅಗ್ನಿಶಾಮಕ ದಳದಿಂದ ಸಿಬ್ಬಂದಿಗಳನ್ನು ನಿಯೋಜಿಸಬೇಕು, ಸಮಸ್ಯೆಗಳು ಉಂಟಾದಲ್ಲಿ ಸ್ಥಳಿಯಮಟ್ಟದಲ್ಲಿ ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು. ಸ್ಥಳಿಯವಾಗಿ ಲಭ್ಯವಿರುವ ಜೆಸಿಬಿ, ಹಿಟಾಚಿ ಗಳ ಮಾಲಿಕರೊಂದಿಗೆ ಸಂಪರ್ಕಿಸಿ ವಿಪತ್ತಿನ ಸಮಯದಲ್ಲಿ ಲಭ್ಯರಿರುವಂತೆ ನೋಡಿಕೊಳ್ಳಬೇಕು ಎಂದರು
ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಮುಂಬರುವ ಸಮಸ್ಯೆಗಳ ಬಗ್ಗೆ, ಕಂಡುಕೊಳ್ಳಬೇಕಾದ ಪರಿಹಾರಗಳ ಬಗ್ಗೆ ಚರ್ಚಿಸಬೇಕು ಇದಕ್ಕಾಗಿ ವಾಟ್ಸಾಪ್ಗ್ರೂಪ್ ಗಳನ್ನು ಸಿದ್ಧಪಡಿಸಬೇಕು ಕಚೇರಿಯಲ್ಲಿ ದಿನದ 24 ಗಂಟೆಯೂ ವಾಟ್ಸಾಪ್ಗ್ರೂಪ್ಗಳನ್ನು ವೀಕ್ಷಿಸುವ ಸಿಬ್ಬಂಧಿಗಳನ್ನು ಗ್ರೂಪ್ನಲ್ಲಿ ನಿಯೋಜಿಸಬೇಕು,.
ಮಳೆಗಾಲದ ಸಂದರ್ಭದಲ್ಲಿ ರಾಜ ಕಾಲುವೆಗಳಿಂದ ಕೃತಕ ನೆರೆ ಉಂಟಾಗುತ್ತಿದ್ದು ಪ್ರತಿ ವರ್ಷವೂ ಜನಜೀವನ ಹಸ್ತವ್ಯಸ್ತಕ್ಕೆ ಕಾರಣವಾಗುತ್ತಿದೆ ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆಗಳ ಹೂಳೆತ್ತಬೇಕು, ಈ ವರ್ಷವೂ ನೆರೆ ಸಂಭವಿಸದಂತೆ ಖುದ್ದು ಅಧಿಕಾರಿಗಳೇ ಭೇಟಿ ನೀಡಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಚಾರ್ಮಾಡಿ ಘಾಟಿ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಪ್ರದೇಶಗಳನ್ನು ರಾಷ್ಟ್ರೀಯ ಹೆದ್ದಾರಿಯವರು ಪಟ್ಟಿ ಮಾಡಬೇಕು, ಘಾಟಿ ಪ್ರದೇಶಗಳಲ್ಲಿ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾದ ಬಗ್ಗೆ ಗೂಗಲ್ ನ ಮುಖಾಂತರ ಮಾಹಿತಿ ಜನರಿಗೆ ತಲುಪುವ ವ್ಯವಸ್ಥೆ ಆಗಬೇಕು, ರಸ್ತೆ ಕಡಿತ ಉಂಟಾದರೆ ಪರ್ಯಾಯ ರಸ್ತೆಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ತಿಳಿಸಿದರು. ಹೆದ್ದಾರಿಗಳಲ್ಲಿ ಭೂಕುಸಿತ ಉಂಟಾದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದರು.
ಮಳೆಯ ಸಂದರ್ಭದಲ್ಲಿ ಅಪಾಯದ ಸ್ಥಳಗಳಲ್ಲಿರುವ ಅಂಗನವಾಡಿ ಮತ್ತು ಶಾಲೆಗಳು ಇರುವಂತಹ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕು, ಹಾಗೂ ಶಿಥಿಲಗೊಂಡ ಶಾಲಾ ಕಟ್ಟಡಗಳ ಬಗ್ಗೆ ಗಮನಹರಿಸಿ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಅಂತಹ ಕಟ್ಟಡಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಮಳೆಯ ಸಂದರ್ಭದಲ್ಲಿ ಮೀನುಗಾರಿಕೆಗೆ ಹೋಗದಂತೆ ಮೀನುಗಾರರಿಗೆ ಜಾಗ್ರತ ಕ್ರಮಗಳ ಸಭೆಯನ್ನು ನಡೆಸಬೇಕು, ಮೀನುಗಾರಿಕೆ ಇಲಾಖೆ ಅಧಿಕಾರಿಗಲ ಮುಂದಾಳತ್ವದಲ್ಲಿ ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಿಸಲು ತಂಡಗಳನ್ನು ಸಿದ್ಧಪಡಿಸಬೇಕು ಹಾಗೂ ಕೋಸ್ಟ್ ಗಾರ್ಡ್ ನ ವತಿಯಿಂದ ಕೂಡ ಸಿಬ್ಬಂದಿಗಳನ್ನು ಒದಗಿಸಬೇಕು. ಡ್ಯಾಮ್ ಗಳಲ್ಲಿ ಸಿಲುಕಿಕೊಂಡಿರುವ ಕಸ ಮರದ ತುಂಡುಗಳನ್ನು ತೆರವುಗೊಳಿಸಬೇಕು, ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು ಹಾಗೂ ವಿಪರೀತ ಗಾಳಿಯಿಂದ ಬಿದ್ದು ಜನರ ಜೀವಕ್ಕೆ ಹಾನಿ ಉಂಟುಡುವ ಜಾಹಿರಾತು ಫಲಕಗಳನ್ನು ಕೂಡಲೆ ತೆರವುಗೊಳಿಸಬೇಕು ಎಂದರು.
ಪ್ರತಿ ತಾಲೂಕು ಅಧಿಕರಿಗಳು ಸಭೆಯನ್ನು ನಡೆಸಿ ಅಗತ್ಯ ಕ್ರಮ ವಹಿಸುವುದರ ಜೊತೆಗೆ , ಅಣುಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಆನಂದ್ ಡಿಸಿಪಿ ಸಿದ್ದಾರ್ಥ್ ಗೋಯಲ್, ಡಿ ಸಿ ಎಫ್ ಆಂಟೋನಿ, ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.