ಧರ್ಮಸ್ಥಳ: ಚಂದ್ರಯಾನ–೩ ರ ಯಶಸ್ಸಿನಿಂದ ಇನ್ನೂ ಹೆಚ್ಚಿನ ಸಾಧನೆ, ಸಂಶೋಧನೆ ನಡೆಯಲಿದೆ ಎಂದು ಖ್ಯಾತ ವಿಜ್ಞಾನಿ ಹಾಗೂ ಬೆಂಗಳೂರಿನ ಇಸ್ರೋ ನಿರ್ದೇಶಕ ರಾಮಕೃಷ್ಣ ಬಿ.ಎನ್. ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಆಯೋಜಿಸಿದ ಸಾಹಿತ್ಯ ಸಮ್ಮೇಳನದ ೯೧ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಚಂದ್ರಯಾನ – ೪ ಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಯುವ ವಿಜ್ಞಾನಿಗಳು ಕೂಡಾ ಕುತೂಹಲ ಮತ್ತು
ಆಸಕ್ತಿಯಿಂದ ಈ ಬಗ್ಗೆ ಪ್ರಯತ್ನಿಸಿ ಸಹಕರಿಸಬೇಕು ಎಂದು ಅವರು ಕೋರಿದರು. ಮುಂದೆ ಬಾಹ್ಯಾಕಾಶ ಯಾನದಲ್ಲಿ ನಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಯಶಸ್ಸು ದೊರಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಗಮಕ ಪರಿಷತ್ ಅಧ್ಯಕ್ಷರಾದ ಡಾ. ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು,
ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಸ್ವಾಗತಿಸಿದರು
ಸಮಾಜಕ್ಕೆ ಹಿತವನ್ನುಂಟುಮಾಡುವುದೇ ಸಾಹಿತ್ಯದ ಉದ್ದೇಶವಾಗಿದೆ. ಅನುಭವ ಮತ್ತು ಭಾವನೆಗಳ ಅಭಿವ್ಯಕ್ತಿಯೇ ಸಾಹಿತ್ಯ. ಎಲ್ಲಾ ಭಾಷೆಗಳ ಸಾಹಿತ್ಯಕ್ಕೂ ಜನಪದ ಸಾಹಿತ್ಯವೇ ಮೂಲವಾಗಿದೆ. ಧರ್ಮ ಮತ್ತು ಸಾಹಿತ್ಯ ಕೇವಲ ನಂಬಿಕೆ ಮತ್ತು ಭಾವನೆಗಳ ವಿಚಾರವಲ್ಲ. ಆವು ವಿಶೇಷ ಜ್ಞಾನ ನೀಡುವ ವಿಜ್ಞಾನವೇ ಆಗಿದೆ ಎಂದು ಅವರು ಹೇಳಿದರು.
ಹೊನ್ನಾವರದ ಡಾ. ಎ. ಶ್ರೀಪಾದ ಶೆಟ್ಟಿ “ಸಾಹಿತ್ಯ-ಸಂಸ್ಕೃತಿಯ ನೆಲೆ” ಬಗ್ಯೆ, ಬೆಂಗಳೂರಿನ ಪ್ರಕಾಶ್ ಬೆಳವಾಡಿ “ರಂಗಭೂಮಿ ಮತ್ತು ಸಾಹಿತ್ಯ ಸಿರಿ” ಬಗ್ಯೆ ಹಾಗೂ ಬಂಟ್ವಾಳದ ಡಾ. ಅಜಕ್ಕಳ ಗಿರೀಶ್ ಭಟ್ “ಭಾಷೆ ಮತ್ತು ಸಾಹಿತ್ಯ ಪರಸ್ಪರ ಅವಲಂಬನೆ” ಬಗ್ಯೆ ಉಪನ್ಯಾಸ ನೀಡಿದರು. ಸಂಚಾರಿ ಗ್ರಂಥಾಲಯದ ಉದ್ಘಾಟನೆಯನ್ನು ಹೇಮಾವತಿ ವಿ ಹೆಗ್ಗಡೆ ನೆರವೇರಿಸಿದರು.
ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.








