*ಶ್ವೇತಾ ರಮೆಶ್ ಬೆಳ್ಳಿಪ್ಪಾಡಿ.
ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆಯಂಗಳಕ್ಕೆ ಬಂದೇ ಬಿಟ್ಟಿತು.ದೀಪಾವಳಿ ಹಬ್ಬವು ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಸಂಭ್ರಮ, ಸಂತಸ ಪಡುವ ಹಬ್ಬ. ಕತ್ತಲೆ ಇರುವಲ್ಲಿ ಬೆಳಕನ್ನು ಹಚ್ಚುವ ಮೂಲಕ ಇಡೀ ನಾಡಿಗೆ ನಾಡೇ ದೀಪಾವಳಿ ಹಬ್ಬವನ್ನು ಶ್ರದ್ಧೆ ಭಕ್ತಿ, ಸಡಗರದಿಂದ ಆಚರಿಸುವರು.ಮಕ್ಕಳಿಗೆ ಹಬ್ಬದ ಸಿಹಿ ಅಡುಗೆ ಸಿಗದಿದ್ದರೂ ಪರವಾಗಿಲ್ಲ; ಪಟಾಕಿಗಳ ಸಂಭ್ರಮವಂತೂ
ಬೇಕೇ ಬೇಕು. ರಾಕೆಟ್ ,ಬಾಂಬ್, ಬೆಳ್ಳುಳ್ಳಿ ಪಟಾಕಿ ಇತ್ಯಾದಿಗಳನ್ನು ಈ ರೀತಿಯಾಗಿ ಡಾಂ! ಡೂಂ! ಜೋರು ಜೋರಾಗಿ ಶಬ್ಬಮಾಡುತ್ತ ಗಂಡು ಮಕ್ಕಳು ಏನೋ ಹುರುಪಿನಲ್ಲಿ ಪಟಾಕಿಗಳನ್ನು ಹಚ್ಚುತ್ತಿದ್ದರೆ; ಮನೆಯ ಚಿಕ್ಕ ಚಿಕ್ಕ ಹೆಣ್ಣುಮಕ್ಕಳು ಗಂಡು ಹುಡುಗರ ಸಾಹಸವನ್ನು ಭಯ ಮಿಶ್ರಿತ ಸಂತೋಷದೊಡನೆ ವೀಕ್ಷಿಸುವುದು ಸರ್ವೇ ಸಾಮಾನ್ಯ. ಇಲ್ಲವೇ ಕೆಲವರು ತುಸು ಧೈರ್ಯ ಮಾಡಿ ನೆಲಚಕ್ರ, ಸುರುಸುರು ಕಡ್ಡಿ, ಹೀಗೆ ತಮ್ಮ ಗತ್ತನ್ನು ಸಣ್ಣ ಪುಟ್ಟ ಪಟಾಕಿಗಳಲ್ಲೆ ತೋರಿಸಿಕೊಳ್ಳುವುದು . ಇವರೆಲ್ಲರ ಮಧ್ಯೆ ಮಕ್ಕಳ ಸಂಭ್ರಮವನ್ನು ವೀಕ್ಷಿಸುವ ಹಿರಿಜೀವಗಳು. ಇವರಲ್ಲರ ಮಧ್ಯೆ ಮಕ್ಕಳನ್ನು ಪದೇ ಪದೇ ಎಚ್ಚರಿಸಲು ಒಂದಿಬ್ಬರಾದರೂ ಪಕ್ಕದಲ್ಲಿ ಇರಬೇಕಲ್ಲವೇ ? ಖುಷಿಯೊಡನೆ ಎಚ್ಚರಿಕೆಯನ್ನು ವಹಿಸಬೇಕಲ್ಲಾ!
ಇರಲಿ, ಮಕ್ಕಳ ಹಬ್ಬ ಈ ರೀತಿಯಾದರೆ; ಮನೆಯ ಗೃಹಣಿಯ ಸಂಭ್ರಮವೇ ಬೇರೆ. ಒಂದು ವಾರದಿಂದ ಮನೆಯನ್ನೆಲ್ಲ ಗುಡಿಸಿ, ಸಾರಿಸಿ ಎಷ್ಟು ಒಪ್ಪ ಮಾಡಿದರೂ ಇನ್ನೂ ಏನೋ ಸರಿಯಾಗಿಲ್ಲ, ಬಾಕಿಯಿದೆ ಎಂದೆನಿಸುವುದು. ಹಬ್ಬದ ಮೊದಲನೇ ದಿನವೇ ಅಕ್ಕಿಯನ್ನು ನೆನೆಸಿಟ್ಟು ಅದನ್ನು ಸಂಜೆ ಹಿಟ್ಟಾಗಿ ರುಬ್ಬಿ ಶುದ್ಧವಾದ ಪಾತ್ರೆಯಲ್ಲಿಟ್ಟು, ಮರುದಿನಬೆಳಗಿನ ಜಾವಕ್ಕೆ ಮಡಿಯುಟ್ಟು ಮನೆಮಂದಿಯೆಲ್ಲ ಸಿಹಿ ನಿದ್ರೆಯಲ್ಲಿರುವಾಗಲೇ ದೋಸೆಯ ಕಾವಲಿಗೋ, ಇಡ್ಲಿಯ ಸಣ್ಣ ಪಿಂಗಾಣಿಗೋ ಹೊಯ್ದು ಅದರ ಆಕಾರಕ್ಕೆಲ್ಲ ಹಿಟ್ಟು ತಯಾರಿಸಿ, (ಕರಾವಳಿ ಭಾಗದ ಜನಪ್ರಿಯ ಉದ್ದಿನ ದೋಸೆ, ಅಥವಾ ಇಡ್ಲಿ) ಎಲ್ಲರು ಏಳುವ ಮುಂಚೆಯೇ ಮಾಡಿ ಮುಗಿಸಿದರೆ ಅದೇ ಖುಷಿ ಮನೆಯೊಡತಿಗೆ.
ಇನ್ನು ಮಕ್ಕಳನ್ನು ನರಕ ಚತುರ್ದಶಿಯ ದಿನದಂದು ಸಂಜೆಯ ವೇಳೆ
ಬೆಳಗಿನ ಜಾವಕ್ಕೆ ಮಡಿಯುಟ್ಟು ಮನೆಮಂದಿಯೆಲ್ಲ ಸಿಹಿ ನಿದ್ರೆಯಲ್ಲಿರುವಾಗಲೇ ದೋಸೆಯ ಕಾವಲಿಗೋ, ಇಡ್ಲಿಯ ಸಣ್ಣ ಪಿಂಗಾಣಿಗೋ ಹೊಯ್ದು ಅದರ ಆಕಾರಕ್ಕೆಲ್ಲ ಹಿಟ್ಟು ತಯಾರಿಸಿ, (ಕರಾವಳಿ ಭಾಗದ ಜನಪ್ರಿಯ ಉದ್ದಿನ ದೋಸೆ, ಅಥವಾ ಇಡ್ಲಿ) ಎಲ್ಲರು ಏಳುವ ಮುಂಚೆಯೇ ಮಾಡಿ ಮುಗಿಸಿದರೆ ಅದೇ ಖುಷಿ ಮನೆಯೊಡತಿಗೆ.
ಇನ್ನು ಮಕ್ಕಳನ್ನು ನರಕ ಚತುರ್ದಶಿಯ ದಿನದಂದು ಸಂಜೆಯ ವೇಳೆ ಎಣ್ಣೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿಸಿದರೆ ಏನೋ ಸಂತೃಪ್ತಿ ಹೆತ್ತಮ್ಮನಿಗೆ. ಇದರ ನಡುವೆ ಮನೆಗೆ ಬರುವ ಅಥಿತಿಗಳನ್ನು ಉಪಚರಿಸಿ ಅವರಿಂದ ಆಶೀರ್ವಾದ ಬೇಡಿಕೊಳ್ಳುವುದು ಸಾಮಾನ್ಯ ಹೆಣ್ಮಕ್ಕಳ ಸಂಪ್ರದಾಯ.ಇನ್ನು, ಮನೆಯ ಯಜಮಾನನಿಗೆ ಅವನಿಗೆಂದೇ ಮೀಸಲಾದಂತಹ ಹಲವು ರೀತಿಯ ಆಚಾರ ವಿಚಾರಗಳು- ದೈವ ದೇವರಿಗೆ ವಿಶೇಷ ಪೂಜೆ ಆ ದಿನ. ತುಳುನಾಡಿನ ಪ್ರಸಿದ್ಧ ದೈವಾರಾಧನೆ, ತಂಬಿಲ ಸೇವೆ ಇತ್ಯಾದಿಗಳಲ್ಲಿ ಕುಟುಂಬದ ಸಮಸ್ತ ಸದಸ್ಯರೆಲ್ಲರು ಪ್ರತಿಯೊಂದು ಕಾರ್ಯದಲ್ಲೂ ಕೈಜೋಡಿಸುತ್ತ ಶ್ರದ್ಧಾ ಭಕ್ತಿಯಿಂದ ಭಾಗಿಯಾಗುವರು .
ಹಾಗೇಯೇ ಬಲಿ ಪಾಡ್ಯಮಿ ದಿನ ಬಲಿಯೇಂದ್ರನನ್ನು ಕರೆಯುವುದು ಎಂಬುದು ಒಂದು ವಿಶೇಷ. ಆ ದಿನ ಅಂಗಳಲ್ಲಿ ಬಲಿಯೇಂದ್ರ ಮರ ಹಾಕಿ, ಅದಕ್ಕೆ ಹೂವಿನ ಹಾರದಿಂದ ಅಲಂಕಾರ ಮಾಡಿ, ಎಲೆಹಾಕಿ ಹಣ್ಣು,ಅವಲಕ್ಕಿ, ಬೆಲ್ಲ ಇತ್ಯಾದಿ ಬಡಿಸಿ ನಂತರ ಒಟ್ಟಾಗಿ ಮೂರು ಬಾರಿ ಕರೆಯುವುದು. ಪುರಾಣದಲ್ಲಿ ತಿಳಿಸಿದಂತೆ, ಆಗ ಬಲಿಯೇಂದ್ರ ಬಂದು ಸ್ವೀಕರಿಸಿ ಹರಸುತ್ತಾನೆ ಎಂಬುದು ವಾಡಿಕೆ.
ಕ್ರಮವಾಗಿ ಅಮವಾಸ್ಯೆಯಲ್ಲಿ ಹೆಂಗಸರ ಪ್ರೇತಾತ್ಮಕ್ಕೂ ಮತ್ತು ಪಾಡ್ಯದಂದು ಗಂಡಸರ ಪ್ರೇತಾತ್ಮಕ್ಕೂ ಅವಲಕ್ಕಿ ಹಾಕುವ ಕ್ರಮ ಪ್ರಚಲಿತದಲ್ಲಿದೆ. ಮನುಷ್ಯನ ಅಸ್ತಿತ್ವದ ನಂತರ ಸತ್ತ ವ್ಯಕ್ತಿಯನ್ನು ಕಳೆದುಕೊಂಡ ಮನೆಯವರು ದುಃಖ ಕಳೆದು ಸಂತೋಷ ತರುವ ದೀಪಾವಳಿ ಹಬ್ಬದಂದು ಅವರ ಕೊನೆಯ ಕಾರ್ಯ ಎಂಬಂತೆ ಆಚರಿಸುವರು. ಹಾಗೆಯೆ ನೆಂಟರಿಷ್ಟರು,ಬಂಧು ಬಾಂಧವರು, ಊರಿನವರು ಆ ದಿನ ಅವಲಕ್ಕಿ, ಬೆಲ್ಲ, ಹಣ್ಣು ಹಾಗೂ ಕಾಯಿಯನ್ನು ತೆಗೆದುಕೊಂಡು ಹೋಗಿ ಬಡಿಸುವ ಕ್ರಮ ಇನ್ನೂ ಪ್ರಾಮುಖ್ಯದಲ್ಲಿದೆ.
ದಿಪಾವಳಿಯ ಸಮಯದಲ್ಲಿ ಆಯುಧ ಪೂಜೆಯು ಒಂದು ಭಾಗ. ಮನೆಯ ಪ್ರೀತಿಯ ವಸ್ತು ಪರಿಕರಗಳ ಮೇಲೆ ಆ ದಿನ ಎಂದೂ ಇರದ ವಿಶೇಷವಾದ ಒಲವು. ಟಿ.ವಿ, ಪ್ರಿಡ್ಜ್, ಮೊಬೈಲ್, ಕಂಪ್ಯೂಟರ್, ಎಲ್ಲಾ ತರದ ಮೆಷಿನ್ ಗಳು ಹಾಗೂ, ಹಾರೆ, ಕತ್ತಿ ಇತ್ಯಾದಿಗಳು ಕೂಡಾ ಆ ದಿನ ಮನೆಯಲ್ಲಿ ವಿಶೇಷವಾದ ಪೂಜೆಗೆ ಅಣಿಯಾಗುತ್ತವೆ.
ಹಾಗೆಯೇ ಹಬ್ಬದ ದಿನದಲ್ಲಿ ವ್ಯಪಾರಸ್ಥರು ಸದಾ ವ್ಯವಹಾರದಲ್ಲಿ ಲಕ್ಷ್ಮಿ ನಮ್ಮ ಜೊತೆಯಾಗಿರಲಿ ಎಂದು ತಮ್ಮ ಅಂಗಡಿ, ಮನೆಗಳಲ್ಲಿ
ಮಹಾಲಕ್ಷ್ಮೀಯನ್ನು ಪೂಜಿಸುತ್ತಾರೆ. ಸಾಮಾನ್ಯವಾಗಿ ಆ ದಿನ ಅಂಗಡಿಗಳಲ್ಲಿ ಬರುವ ಗ್ರಾಹಕರಿಗೂ ಕೂಡಾ ಸಿಹಿಯನ್ನು ಹಂಚಿ ಲಕ್ಷ್ಮೀ ಪೂಜೆಯನ್ನು ಆಚರಿಸುತ್ತಾರೆ. ಹಿಂದಿನ ಕಾಲದಲ್ಲಿ ಮಕ್ಕಳು; ಯಾವತ್ತೂ ಹೋಗದಿದ್ದರೂ ಆ ದಿನ ಮಾತ್ರ ಸಿಹಿಗೋಸ್ಕರವೇ ತಪ್ಪದೇ ಹೋಗುತ್ತಿದ್ದರು. ಅದರಲ್ಲೂ ಕೂಡಾ ಸ್ವಾಭಿಮಾನಿ ಮಕ್ಕಳು, ಏನೋ ಒಂದು ರೂಪಾಯಿಯೋ, ಎರಡು ರೂಪಾಯಿಗಳ ಪಟಾಕಿ ತಗೊಂಡ ಮೇಲೆಯೇ ಅಲ್ಲಿಯ ಸಿಹಿ, ಪಾನಕ ಸೇವಿಸಿ ಸಂತೃಪ್ತಿಯಿಂದ ಮೆಲ್ಲಗೆ ಪರಾರಿಯಾಗುತ್ತಿದ್ದರು. ಅವರ ಮುಖದಲ್ಲಿಯ ಸಂತೋಷಕ್ಕೆ ನಿಜವಾಗಿಯೂ ಬೆಲೆ ಕಟ್ಟಲಾದಿತೇ?
ಇನ್ನು ದೀಪಾವಳಿಯಲ್ಲಿ ಗೋ ಪೂಜೆಯನ್ನು ಮರೆತರೆ ಹೇಗೆ? ಹೌದು ಹಟ್ಟಿಯಲ್ಲಿದ್ದ ಗೋಮಾತೆಯನ್ನು ಸ್ನಾನ ಮಾಡಿಸಿ ಕಟ್ಟದ ಹೂ ಮಾಲೆಯನ್ನು ಅವಳ ಕೊರಳಿಗೆ ಹಾಕಿ, ಬೆಳಕು ತೋರಿಸಿ ಅವಳಿಗೆ ಹಣ್ಣು, ರಸಾಯಣದ ಜೊತೆಗೆ ಅವಲಕ್ಕಿ ದೋಸೆ ಕೊಟ್ಟು ಅವಳು ಸ್ವೀಕರಿಸಿ
ಅವಳಿಂದ ಆಶಿರ್ವಾದ ಪಡೆಯುತ್ತೇವೆ.
ಇಷ್ಟೆಲ್ಲ ಆದಾಗ ಹಬ್ಬ ಬಂತು; ಸದ್ದು ಮಾಡಿ ಹೋಗೇ ಬಿಟ್ಟಿತು ಎನ್ನುವಂತೆ, ಇನ್ನು ಮನೆ ಯೊಡತಿಗೆ ಓರಣಮಾಡುವುದೇ ಕೆಲಸ, ಹಬ್ಬಕ್ಕೆಂದು ಊರಿಗೆ ಬಂದವರು ಬಸ್ಸು ಬರುವ ದಾರಿ ನೋಡಿದರೆ, ಇನ್ನು ಮಕ್ಕಳ ರಜೆಯೂ ಮುಗಿದು ನಾಳೆಗೆ ಮನೆ ಕೆಲಸ ಮಾಡಲು ಪುಸ್ತಕ ಹಿಡಿದು ಹಬ್ಬದ ನೆನಪನ್ನು ಮೆಲುಕು ಹಾಕುತ್ತ ಕಾಯುವರು ಬರುವ ಇನ್ನೊಂದು ವರುಷದ ದೀಪಾವಳಿಯನ್ನು.
(ಶ್ವೇತಾ ರಮೆಶ್ ಬೆಳ್ಳಿಪ್ಪಾಡಿ ಕವಿಯತ್ರಿ ಹಾಗೂ ಲೇಖಕಿ)