ವಡೋದರ: ಮಹಿಳೆಯರ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಕೊನೇ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಗೆಲುವಿನ ನಗೆ ಬೀರಿರುವ ಡೆಲ್ಲಿ ಕ್ಯಾಪಿಟಲ್ಸ್, ಎಲಿಮಿನೇಟರ್ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ.ವಡೋದರದಲ್ಲಿ ನಡೆದ ಪಂದ್ಯದಲ್ಲಿ ಮೊದಲು
ಬ್ಯಾಟಿಂಗ್ ಮಾಡಿದ ಯುಪಿ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 122 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಗುರಿಯನ್ನು ಡೆಲ್ಲಿ. 5 ವಿಕೆಟ್ಗಳನ್ನು ಕಳೆದುಕೊಂಡು, ಇನ್ನೂ 8 ಎಸೆತಗಳು ಬಾಕಿ ಇರುವಂತೆ ತಲುಪಿತು. ಇದರೊಂದಿಗೆ, ಸತತ ನಾಲ್ಕನೇ ಆವೃತ್ತಿಯಲ್ಲೂ ಎಲಿಮಿನೇಟರ್ ಹಂತಕ್ಕೇರಿದ ಸಾಧನೆ ಮಾಡಿತು.
ಆದರೆ, ಈ ಸೋಲು ಯುಪಿ ಬಳಗದ ಪ್ರಶಸ್ತಿ ಕನಸನ್ನು ನುಚ್ಚು ನೂರು ಮಾಡಿತು. ಅಷ್ಟೇ ಅಲ್ಲ, ಯುಪಿ ಗೆದ್ದರೆ ರನ್ ರೇಟ್ ಆಧಾರದಲ್ಲಿ ಮುಂದಿನ ಹಂತಕ್ಕೇರುವ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್ಗೂ ಮುಳುವಾಯಿತು. ಮೊದಲ ಮೂರು ಆವೃತ್ತಿಗಳಲ್ಲಿ ಎರಡು ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಮುಂಬೈ, ಇದೇ ಮೊದಲ ಬಾರಿಗೆ ಗುಂಪು ಹಂತದಲ್ಲೇ ನಿರ್ಗಮಿಸುವಂತಾಯಿತು





