ಹೈದರಾಬಾದ್: ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಸತತ ಎರಡನೇ ಜಯ. ಮೊದಲ ಗೆಲುವಿನ ಬಳಿಕ ಎಸ್ಆರ್ಎಚ್ ಎರಡನೇ ಸೋಲನುಭವಿಸಿತು.ಎಸ್ಆರ್ಎಚ್ 18.4 ಓವರ್ಗಳಲ್ಲಿ 163 ರನ್ ಗಳಿಸಿ ಆಲೌಟ್ ಆಯಿತು.
164 ರನ್ಗಳ ಸ್ಪರ್ಧಾತ್ಮಕ ಗುರಿ ಡೆಲ್ಲಿ ಪಡೆಗೆ ಸವಾಲೇ ಆಗಲಿಲ್ಲ. 3 ವಿಕೆಟ್ಗೆ 166 ರನ್ ಗಳಿಸಿ ಜಯದ ನಗೆ ಬೀರಿತು.ಆರಂಭಿಕ ಬ್ಯಾಟರ್ಗಳಾದ
ಜೇಕ್ ಫ್ರೇಸರ್ ಮೆಕ್ಗರ್ಕ್ (38 ರನ್) ಹಾಗೂ ಫಾಫ್ ಡು ಪ್ಲೆಸಿ (50 ರನ್) ಮೊದಲ ವಿಕೆಟ್ಗೆ 81 ರನ್ ಕಲೆಹಾಕಿದರು.
ಕೇವಲ 27 ಎಸೆತಗಳನ್ನು ಎದುರಿಸಿದ ಪ್ಲೆಸಿ 50 ರನ್ ಬಾರಿಸಿದರು. ಇದು ಐಪಿಎಲ್ನಲ್ಲಿ ಅವರ 38ನೇ ಅರ್ಧಶತಕ. ಇದೇ ಮೊದಲ ಸಲ ಡೆಲ್ಲಿ ಪರ ಕಣಕ್ಕಿಳಿದ ಕನ್ನಡಿಗ ಕೆ.ಎಲ್.ರಾಹುಲ್ 5 ಎಸೆತಗಳಲ್ಲಿ 15 ರನ್ ಗಳಿಸಿದರು.ಅಭಿಷೇಕ್ ಪೊರೆಲ್ (34 ರನ್) ಮತ್ತು ಟಿಟ್ಸನ್ ಸ್ಟಬ್ಸ್ (21 ರನ್) ಕೊನೆಯಲ್ಲಿ ಜಯ ಪೂರ್ಣಗೊಳಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್ಆರ್ಎಚ್ ತಂಡದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕಕ್ಕೆ ಡೆಲ್ಲಿ ವೇಗಿ ಮಿಚೇಲ್ ಸ್ಟಾರ್ಕ್ ಪೆಟ್ಟು ಕೊಟ್ಟರು.ಸ್ಫೋಟಕ ಬ್ಯಾಟಿಂಗ್ಗೆ ಹೆಸರಾಗಿರುವ ಅಭಿಷೇಕ್ ಶರ್ಮಾ ಮೊದಲ ಓವರ್ನಲ್ಲೇ ರನೌಟ್ ಆದರು. ಇನಿಂಗ್ಸ್ನ ಮೂರನೇ ಓವರ್ನಲ್ಲಿ ಸ್ಟಾರ್ಕ್ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಇಶಾನ್ ಕಿಶನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಔಟ್ ಮಾಡಿದರು. ತಂಡದ ಮೊತ್ತ 37 ರನ್ ಆಗುವಷ್ಟರಲ್ಲಿ ಟ್ರಾವಿಸ್ ಹೆಡ್ಗೂ ಪೆವಿಲಿಯನ್ ದಾರಿ ತೋರಿದರು.ಹೀಗಾಗಿ, ಪವರ್ ಪ್ಲೇ ಮುಕ್ತಾಯದ ವೇಳೆಗೆ ಎಸ್ಆರ್ಎಚ್ 58 ರನ್ ಗಳಿಸಿ ಪ್ರಮುಖ ನಾಲ್ಕುವಿಕೆಟ್ಗಳನ್ನು ಕಳೆದುಕೊಂಡಿತ್ತು.
5ನೇ ವಿಕೆಟ್ಗೆ ಜೊತೆಯಾದ ಅನಿಕೇತ್ ಶರ್ಮಾ ಹಾಗೂ
ಹೆನ್ರಿಚ್ ಕ್ಲಾಸೆನ್, 77 ರನ್ ಸೇರಿಸಿ ಕುಸಿತ ತಪ್ಪಿಸಿದರು. ಕ್ಲಾಸೆನ್ (32 ರನ್) ಔಟಾದ ನಂತರವೂ, ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರಿಸಿದ ಅನಿಕೇತ್, ಐಪಿಎಲ್ನಲ್ಲಿ ಮೊದಲ ಅರ್ಧಶತಕ ಬಾರಿಸಿದರು.41 ಎಸೆತಗಳನ್ನು ಎದುರಿಸಿದ ಅನಿಕೇತ್, 5 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 74 ರನ್ ಗಳಿಸಿದರು. ತಂಡದ ಮೊತ್ತ 148 ರನ್ ಆಗಿದ್ದಾಗ ಔಟಾದರು. ನಂತರ ಎಸ್ಆರ್ಎಚ್ ಆಟ ಹೆಚ್ಚು ಹೊತ್ತು ನಡೆಯಲಿಲ್ಲ.ಡೆಲ್ಲಿ ಪರ ಸ್ಟಾರ್ಕ್ 5 ವಿಕೆಟ್ ಉರುಳಿಸಿದರೆ, ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದರು. ಇನ್ನೊಂದು ವಿಕೆಟ್ ಮೋಹಿತ್ ಶರ್ಮಾ ಪಾಲಾಯಿತು.
ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಬೃಹತ್ ಮೊತ್ತ (286 ರನ್) ಕಲೆಹಾಕಿ ಗೆದ್ದಿದ್ದ ಎಸ್ಆರ್ಎಚ್ಗೆ ಇದು ಸತತ ಎರಡನೇ ಸೋಲು. ಎರಡನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಎದುರು 7 ವಿಕೆಟ್ಗಳಿಂದ ಸೋತಿದ್ದ ಈ ತಂಡ, ಇದೀಗ 7 ವಿಕೆಟ್ಗಳ ಸೋಲು ಅನುಭವಿಸಿದೆ.
ಜಯದ ಓಟ ಮುಂದುವರಿಸಿದ ಡೆಲ್ಲಿ ತಂಡ ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಎಲ್ಎಸ್ಜಿ ಎದುರು 1 ವಿಕೆಟ್ ಅಂತರದಿಂದ ಗೆದ್ದಿತ್ತು. ಹೀಗಾಗಿ, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸ್ಥಾನದಲ್ಲಿದೆ.