ಸುಳ್ಯ: ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಹಾಗೂ ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ 52ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ‘ಸುಳ್ಯ ದಸರಾ’ ಅ.20 ರಿಂದ 28ರವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ನಡೆಯಲಿದೆ. ಅದ್ದೂರಿ ಸುಳ್ಯ ದಸರಾ ಉತ್ಸವಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಹಾಗೂ ದಸರಾ ಉತ್ಸವ ಸಮಿತಿಯ
ಪದಾಧಿಕಾರಿಗಳು ತಿಳಿದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್’ ಈ ಬಾರಿ ಶೋಭಾಯಾತ್ರೆಯ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು ಮಧ್ಯಾಹ್ನದ ಬಳಿಕ 3 ಗಂಟೆಗೆ ಸರಿಯಾಗಿ ಶೋಭಾಯಾತ್ರೆ ಹೊರಡಲಿದೆ. ರಾತ್ರಿ 12 ಗಂಟೆಗೆ ಶೋಭಾಯಾತ್ರೆ ಮುಕ್ತಾಯವಾಗಲಿದ್ದು ಒಂದು ಗಂಟೆಯ ಬಳಿಕ ಚಂದ್ರಗ್ರಹಣ ಇರುವ ಕಾರಣ ರಾತ್ರಿ ಒಂದು ಗಂಟೆಯ ಮೊದಲು ಮೂರ್ತಿಯ ಜಲಸ್ತಂಭನ ನಡೆಯಬೇಕಾಗಿದೆ ಎಂದು ಹೇಳಿದರು.
ಶ್ರೀ ಶಾರದಾಂಬಾ ಸೇವಾ ದಸರಾ ಸೇವಾ ಟ್ರಸ್ಟ್ನ ಉಪಾಧ್ಯಕ್ಷರಾದ ನಾರಾಯಣ ಕೇಕಡ್ಕ ಹಾಗೂ ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಮಾತನಾಡಿ ‘ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾಕ್ಕೆ ಅದ್ದೂರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.ವಿವಿಧ ಧಾರ್ಮಿಕ ಹಾಗೂ ವೈವಿಧ್ಯಮಯ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುಳ್ಯ ದಸರಾ ಉತ್ಸವ ನಡೆಯಲಿದೆ ಎಂದು ವಿವರಿಸಿದರು.
ಸಾರ್ವಜನಿಕ ಶ್ರಿ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ ಕಾರ್ಯಕ್ರಮದ ವಿವರ ನೀಡಿದರು. ‘ಅ.20ರಂದು ಪೂ.9.30ಕ್ಕೆ ಜ್ಯೋತಿ ವೃತ್ತದಿಂದ ಶಾರದಾ ಮೂರ್ತಿಯ ಪ್ರತಿಷ್ಠಾ ಮೆರವಣಿಗೆ ನಡೆದು 10.47ಕ್ಕೆ ಶ್ರೀ ಶಾರದಾಂಬಾ ವೇದಿಕೆಯಲ್ಲಿ ಪ್ರತಿಷ್ಠೆ ನಡೆಯಲಿದೆ. ಪ್ರತಿ ದಿನ ಮಧ್ಯಾಹ್ನ 1ಕ್ಕೆ ಮತ್ತು ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದೆ.20ರಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ಗಾನ ನೃತ್ಯ ಅಕಾಡೆಮಿಯ ವತಿಯಿಂದ ನೃತ್ಯ ಸಂಗಮ ಮತ್ತು ನೃತ್ಯ ರೂಪಕ ನಡೆಯಲಿದೆ.
ಅ.21ರಂದು ಸಂಜೆ 6.30ರಿಂದ ಭಜನೆ 7.30ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಅ.22 ರಂದು ಸಂಜೆ 6.30ರಿಂದ ಭಜನೆ 7.30ರಿಂದ ಜಾನಪದ ಕುಣಿತ ಮತ್ತು ನೃತ್ಯ ವೈಭವ ನಡೆಯಲಿದೆ.
ಅ.23 ರಂದು ಸಂಜೆ 6.30ರಿಂದ ಭಜನೆ 7.30ರಿಂದ ಡ್ಯಾನ್ಸ್ ಡ್ಯಾನ್ಸ್ ನಡೆಯಲಿದೆ.
ಅ.24 ರಂದು ಬೆಳಿಗ್ಗೆ 6.21ರಿಂದ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ.
ಸಂಜೆ 6.30ರಿಂದ ಭಜನೆ 7.30ರಿಂದ ಸಾಂಸ್ಕೃತಿಕ ಸಂಜೆ ನಡೆಯಲಿದೆ.
ಅ.25 ರಂದು ಸಂಜೆ 6.30ರಿಂದ ಭಜನೆ 7.30ರಿಂದ ಜಾನಪದ ನೃತ್ಯ ವೈಭವ, 9ರಿಂದ ಯಕ್ಷಗಾನ ನಡೆಯಲಿದೆ.
ಅ.26 ರಂದು ಬೆಳಿಗ್ಗೆ 8ರಿಂದ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಮಹಾಗಣಪತಿ ಹವನ, ಚಂಡಿಕಾ ಮಹಾಯಾಗ ನಡೆಯಲಿದೆ. 12.30ಕ್ಕೆ ಪೂರ್ಣಾಹುತಿ, ಮಹಾ ಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6.30ರಿಂದ ಭಜನೆ 7.30ರಿಂದ ನೃತ್ಯೋತ್ಸವ ನಡೆಯಲಿದೆ.
ಅ.27 ರಂದು ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ. 7.30ರಿಂದ ಸಂಗೀತ ರಸಮಂಜರಿ, ರಾತ್ರಿ 10ಕ್ಕೆ ಶ್ರೀ ದೇವಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ವೈಭವದ ಮಹಾಪೂಜೆ ನಡೆಯಲಿದೆ.
ಅ.28ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆಯಾಗಿ ಸಂಜೆ 3ರಿಂದ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. ಶ್ರೀ ದೇವಿಗೆ ವಿಶೇಷ ಅಲಂಕಾರದೊಂದಿಗೆ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪದಲ್ಲಿ ಶ್ರೀ ದೇವಿಯ ಶೋಭಾಯಾತ್ರೆ ನಡೆಯಲಿದೆ. ಜನರ ಮೈಮನ ರೋಮಾಂಚನಗೊಳಿಸುವ ಚಲಿಸುವ ಸ್ತಬ್ದ ಚಿತ್ರಗಳು, ಕಿವಿಗಪ್ಪಆಸುವ ನಾಸಿಕ್ ಬ್ಯಾಂಡ್ನ ಅಬ್ಬರ, ಕೊಂಬು, ಕಹಳೆ, ವಾಲಗ, ವಿಶೇಷ ಸಿಡಿಮದ್ದು, ಇನ್ನಿತರ ಹತ್ತು ಹಲವು ಆಕರ್ಷಣಿಗಳೊಂದಿಗೆ ನೋಡುಗರ ಕಣ್ಣಿಗೆ ಹಬ್ಬ ನೀಡಲಿರುವ ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸುಳ್ಯ ದಸರಾ ಸಂಪನ್ನಗೊಳ್ಳಲಿದೆ ಎಂದು ಚಿದಾನಂದ ವಿದ್ಯಾನಗರ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾದ ಶಾಸಕಿ ಭಾಗೀರಥಿ ಮುರುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಪುರುಷೋತ್ತಮ ಕೆ, ಪದಾಧಿಕಾರಿಗಳಾದ ರಾಜು ಪಂಡಿತ್, ಸತೀಶ್ ಎನ್.ಕೆ, ಮಂಜುನಾಥ ಬಳ್ಳಾರಿ, ದೀಪಕ್ ಪಿ.ಎಸ್, ಕುಸುಮಾಧರ ರೈ ಬೂಡು, ಪದ್ಮನಾಭ ಅರ್ಭಡ್ಕ, ಹೇಮನಾಥ ಕೇರ್ಪಳ ಉಪಸ್ಥಿತರಿದ್ದರು.