ಧರ್ಮಸ್ಥಳ: ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ
ಶನಿವಾರ ಸಂಜೆ ಗಂಟೆ 6.48ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ೫೩ನೇ ವರ್ಷದ ಉಚಿತ ಸಾಮೂಹಿಕ ಸಮಾರಂಭದಲ್ಲಿ 75 ಜೋಡಿ ವಧೂ-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.
ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಮದುವೆಯ ಭವ್ಯ ಮೆರವಣಿಗೆಯಲ್ಲಿ
ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.ವೇದಘೋಷ, ಮಂಗಳವಾದ್ಯ, ಮಂತ್ರಾಕ್ಷತೆಯೊಂದಿಗೆ ಸಂಜೆ ಗಂಟೆ ೬.೪೮ ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಹಾರ ವಿನಿಮಯ ಮತ್ತು ಮಾಂಗಲ್ಯಧಾರಣೆ ನಡೆಯಿತು. ಅವರವರ ಜಾತಿ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.
ಸುಶ್ರಾವ್ಯವಾದ ಶೋಭಾನೆ ಹಾಡುಗಳು, ವಧು-ವರರಿಗೆ ಆರತಿ ಕಾರ್ಯಕ್ರಮ ಮದುವೆಗೆ ವಿಶೇಷ ಸೊಗಡನ್ನು ನೀಡಿತು.

ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ನೂತನ ದಂಪತಿಗಳಿಗೆ ಶುಭ ಹಾರೈಸಿದರು. ಕಳೆದ 52 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹದಲ್ಲಿ 12,900 ಜೊತೆ ವಿವಾಹವಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯಜೀವನ ನಡೆಸುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದರು.
ವಿಧಾನಪರಿಷತ್ ಸದಸ್ಯ

ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು.ಧರ್ಮಸ್ಥಳದ ವತಿಯಿಂದ ನೂತನ ದಂಪತಿಗಳಿಗೆ ವಿಶೇಷ ಉಡುಗೊರೆ ನೀಡಲಾಯಿತು.ಹೇಮಾವತಿ ವಿ. ಹೆಗ್ಗಡೆಯವರು, ಶ್ರದ್ಧಾಅಮಿತ್, ಅಮಿತ್ ಉಪಸ್ಥಿತರಿದ್ದರು.
ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಅಖಿಲೇಶ್ ಶೆಟ್ಟಿ ಧರ್ಮಸ್ಥಳ ಧನ್ಯವಾದವಿತ್ತರು.ಎಸ್.ಡಿ.ಎಂ. ಸನಿವಾಸ ಕಾಲೇಜಿನ ಪ್ರಾಂಶುಪಾಲ ಡಾ. ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.






