ಚೆನ್ನೈ:ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) 6 ವಿಕೆಟ್ ಗೆಲುವು ದಾಖಲಿಸಿ ಶುಭಾರಂಭ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 173 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ
18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಚೆನ್ನೈ ಪರ ರಚಿನ್ ರವೀಂದ್ರ 37, ಋತುರಾಜ್ ಗಾಯಕ್ವಾಡ್ 15, ಅಜಿಂಕ್ಯಾ ರಹಾನೆ 27, ಡ್ಯಾರೆಲ್ ಮಿಚ್ಚೆಲ್ 22, ಶಿವಂ ದುಬೆ ಅಜೇಯ 34 ರವೀಂದ್ರ ಜಡೇಜ ಅಜೇಯ 25ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ನಾಯಕ ಫಫ್ ಡು ಪ್ಲೆಸಿ (35) ಹಾಗೂ ವಿರಾಟ್ ಕೊಹ್ಲಿ(21) ಉತ್ತಮ ಆರಂಭ ಒದಗಿಸಿದರು. ಬಳಿಕ ರಜತ್ ಪಾಟೀದಾರ್ (0) ಗ್ಲೆನ್ ಮ್ಯಾಕ್ಸ್ವೆಲ್(0) ಕ್ಯಾಮರಾನ್ ಗ್ರೀನ್ (18) ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರಿಂದ 11.4 ಓವರ್ಗಳಲ್ಲಿ ಕೇವಲ 78 ರನ್ಗಳಿಗೆ 5 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್ಸಿಬಿಗೆ
ದಿನೇಶ್ ಕಾರ್ತಿಕ್ ಮತ್ತು ಅನೂಜ್ ರಾವತ್ ಮುರಿಯದ 6ನೇ ವಿಕೆಟ್ ಪಾಲುದಾರಿಕೆಯಲ್ಲಿ 95 ರನ್ ಕಲೆಹಾಕಿ ಆಸರೆಯಾದರು.
25 ಎಸೆತಗಳನ್ನು ಎದುರಿಸಿದ ಅನೂಜ್, 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 48 ರನ್ ಗಳಿಸಿದರೆ, ದಿನೇಶ್, 26 ಎಸೆತಗಳಲ್ಲಿ 38 ರನ್ ಗಳಿಸಿ ಕೊನೇ ಎಸೆತದಲ್ಲಿ ಔಟಾದರು. ಅವರ ಇನಿಂಗ್ಸ್ನಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಇದ್ದವು.ಇವರಿಬ್ಬರ ಆಟದಿಂದಾಗಿ, ಆರ್ಸಿಬಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಚೆನ್ನೈ ಪರ, ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಮುಸ್ತಫಿಜುರ್ 4 ಓವರ್ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.





