ಸುಳ್ಯ: ದೀಪಾವಳಿ ಎಂದರೆ ದೀಪಗಳ ಹಬ್ಬ ಹಲವು ಆಚರಣೆ, ಅಚಾರ ವಿಚಾರ, ಸಂಪ್ರದಾಯಗಳ ಸಮ್ಮಿಲನ. ಜೊತೆಗೆ ಸಿಡಿಮದ್ದು ಅಬ್ಬರಿಸುವ ಹಬ್ಬವೂ ಹೌದು. ಬೆಳಕಿನ ಪ್ರಭಾವಳಿ ಚೆಲ್ಲುವ ದೀಪಾವಳಿಯ ಸುಂದರ ರಾತ್ರಿಗಳಿಗೆ ಡಾಂ..ಡೂಂ ಶಬ್ದ, ಮುಗಿಲೆತ್ತರ ಏರುವ ದುರುಸು ಬಾಣಗಳು, ಸುರು ಸುರು ಕಡ್ಡಿ, ಬುಗುರಿ.. ನೆಲ ಚಕ್ರ.. ಹೀಗೆಕತ್ತಲನ್ನು ಸೀಳಿ ಬೆಳಕಿನ ಚಿತ್ತಾರ ಬಿಡಿಸುವ ಪಟಾಕಿ ಇಲ್ಲದೆ ಎಲ್ಲಿಯ ದೀಪಾವಳಿ. ಆದುದರಿಂದ ದೀಪಾವಳಿ ಎಂದರೆ ಮನಸ್ಸಿಗೆ ಓಡೋಡಿ ಬರುವುದೇ
ಪಟಾಕಿಯ ಅಬ್ಬರ, ಬೆಳಕಿನ ವರ್ಣ ಚಿತ್ತಾರ. ಆದುದರಿಂದಲೇ ದೀಪಾವಳಿ ಸಂಭ್ರಮಕ್ಕೆ ಪಟಾಕಿಗಳು ಅನಿವಾರ್ಯ ಭಾಗ. ಹಾಗಾದರೆ ಈ ಬಾರಿ ಸುಳ್ಯದಲ್ಲಿ ಪಟಾಕಿ ವ್ಯಾಪಾರ ಹೇಗಿತ್ತು..? ಈ ಬಾರಿ ಸುಳ್ಯದಲ್ಲಿ ಪಟಾಕಿ ವ್ಯಾಪಾರ ಬಲು ವಿಶಿಷ್ಟವಾಗಿತ್ತು. ಸಾಮಾನ್ಯವಾಗಿ ಪಟಾಕಿ ಮಾರಾಟಕ್ಕೆ ಲೈಸೆನ್ಸ್ ಪಡೆದವರು ಬೇರೆ ಬೇರೆ ಪಟಾಕಿ ಸ್ಟಾಲ್ಗಳನ್ನು ಹಾಕಿ ವ್ಯಾಪಾರ ಮಾಡುತ್ತಿದ್ದರು. ಆದರೆ ಈ ಬಾರಿ ಎಲ್ಲಾ ಪರವಾನಗಿದಾರರು ಒಟ್ಟಾಗಿ ಒಂದೇ ಪಟಾಕಿ ಸ್ಟಾಲ್ ಅಳವಡಿಸಿರುವುದು ವಿಶೇಷವಾಗಿತ್ತು. ಸುಳ್ಯದ ಪ್ರಭು ಗ್ರೌಂಡ್ನಲ್ಲಿ ವಿಶಾಲವಾದ ಸ್ಟಾಲ್ ಹಾಕಿ ಎಲ್ಲರೂ ಒಟ್ಟಾಗಿ ವ್ಯಾಪಾರ ನಡೆಸಿದ್ದು ಕಂಡು ಬಂದಿತ್ತು. ದೀಪಾವಳಿಗೆ ಭರ್ಜರಿ ಪಟಾಕಿ ಮಾರಾಟ ನಡೆದಿದೆ ಎನ್ನುತ್ತಾರೆ ಪಟಾಕಿ ಅಂಗಡಿಯ ಪಾಲುದಾರರಾದ ಬೂಡು ರಾಧಾಕೃಷ್ಣ ರೈ. ಅತ್ಯುತ್ತಮ ಗುಣಮಟ್ಟದ ಹಸಿರು ಪಟಾಕಿ ಮಾರಾಟ ಮಾಡಲಾಗಿದ್ದು ಎಲ್ಲಾ ವಿಭಾಗದವರೂ ಪಟಾಕಿ ಖರೀದಿಸಲು ಆಗಮಿಸಿದ್ದಾರೆ ಎನ್ನುತ್ತಾರೆ ಅವರು.
ಪಟಾಕಿ ಮಾರಾಟಗಾರರ ಮಧ್ಯೆ ಸ್ಪರ್ಧೆ ಇಲ್ಲದೆ ಎಲ್ಲರೂ ಒಟ್ಟಾಗಿ ವ್ಯಾಪಾರ ನಡೆಸಿದ್ದು ಈ ಬಾರಿಯ ಹೈಲೈಟ್ಸ್.
3-4 ದಿನಗಳಿಂದ ಪಟಾಕಿ ವ್ಯಾಪಾರ ಉತ್ತಮವಾಗಿ ನಡೆದಿದೆ ಎನ್ನುತ್ತಾರೆ ಸುನಿಲ್ ಕೇರ್ಪಳ ಹಾಗೂ ರಾಜು ಪಂಡಿತ್. ಸಂಜೆಯ ವೇಳೆ ನಗರದ
ಮಂದಿ ಸಂಜೆಯ ವೇಳೆಗೆ ಗುಂಪು ಗುಂಪಾಗಿ ಪಟಾಕಿ ಖರೀದಿಗೆ ಆಗಮಿಸುತ್ತಿದ್ದುದು ಕಂಡು ಬಂತು. ಹಗಲಿನ ವೇಳೆ ತಾಲೂಕಿನ ವಿವಿಧ ಭಾಗಗಳಿಂದ ಕಾಸರಗೋಡು, ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದಲೂ ಹಲವು ಮಂದಿ ಪಟಾಕಿ ಖರೀದಿಗೆ ಆಗಮಿಸಿದ್ದರು ಎನ್ನುತ್ತಾರೆ ಬೂಡು ರಾಧಾಕೃಷ್ಣ ರೈ.
ಆದರೆ ದೀಪಾವಳಿ ಸಂದರ್ಭದಲ್ಲಿ ಪ್ರತಿ ದಿನ ಸುರಿದ ಮಳೆ ಪಟಾಕಿ ವ್ಯಾಪಾರಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿತ್ತು ಎನ್ನುತ್ತಾರೆ ದಿನೇಶ್ ಅಡ್ಕಾರ್. ಸಂಜೆಯ ವೇಳೆಗೆ ಮಳೆ ಸುರಿದರೆ ಜನರು ಬರುವುದು ಕಡಿಮೆಯಾಗುತ್ತದೆ ಎನ್ನುತ್ತಾರೆ ಅವರು. ಶನಿವಾರ ಸಂಜೆಯ ವೇಳೆಗೆ ಮಳೆ ಬಿಟ್ಟ ಕಾರಣ ಪಟಾಕಿ ಖರೀದಿಗೆ ಸ್ವಲ್ಪ ಮಟ್ಟಿಗೆ ಜನರು ಬರಲು ಕಾರಣವಾಗಿದೆ. ಆನ್ಲೈನ್ ಮೂಲಕ ಪಟಾಕಿ ಖರೀದಿಸುವುದು ಕೂಡ ಸ್ಟಾಲ್ನ ಮಾರಾಟಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ ಎನ್ನುತ್ತಾರೆ ದಿನೇಶ್ ಅಡ್ಕಾರ್. ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿಯೂ ಪಟಾಕಿ ಅಬ್ಬರ, ಮಾರಾಟ ಭರ್ಜರಿಯಾಗಿತ್ತು. ಒಟ್ಟಿನಲ್ಲಿ
ದೀಪಾವಳಿ ಹಬ್ಬಕ್ಕೆ ಭರ್ಜರಿ ವ್ಯಾಪಾರ ನಡೆದಿದೆ ಎಂಬುದು ಪಟಾಕಿ ವ್ಯಾಪಾರಸ್ಥರ ಅಭಿಪ್ರಾಯ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪಟಾಕಿಗಳನ್ನು ಒಡೆಯುವುದು ಸ್ವಲ್ಪ ಕಡಿಮೆಯೇ ಎಂಬುದು ಸಾರ್ವಜನಿಕರ ಅಭಿಪ್ರಾಯ. ಒಟ್ಟಿನಲ್ಲಿ ಕಿವಿಗಪ್ಪಳಿಸಿದ ಪಟಾಕಿ ಸಿಡಿಮದ್ದಿನ ಅಬ್ಬರ, ವರ್ಣ. ಚಿತ್ತಾರದ ದೀಪಾವಳಿಯ ಸಂಭ್ರಮ, ಪಟಾಕಿಯ ಅಬ್ಬರ ಕೊನೆಯ ಹಂತಕ್ಕೆ ಬಂದಿದೆ.