ಸುಬ್ರಹ್ಮಣ್ಯ:ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕಿದುವಿನ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ಮಾ.11ರಂದು ರೈತ ಸಮ್ಮೇಳನ ನಡೆಯಲಿದೆ ಎಂದು ಕಾಸರಗೋಡು ಸಿಪಿಸಿಆರ್ಐ ನಿರ್ದೇಶಕ ಡಾ.ಕೆ.ಬಿ. ಹೆಬ್ಬಾರ್ ತಿಳಿಸಿದರು. ಅವರು ಕಿದುವಿನ ಸಿಪಿಸಿಆರ್ಐ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಿಪಿಸಿಆರ್ಐ ಸಂಸ್ಥೆ ಈಗಾಗಲೇ
ಕೃಷಿ ಬೆಳೆಗಳ ಸಂಶೋಧನೆಯಲ್ಲಿ ತೊಡಗಿಕೊಂಡು ಕೃಷಿಕರು, ರೈತರಿಕೆ ಪೂರಕವಾದ ಕೆಲಸ ಮಾಡುತ್ತಿದ್ದು, ಮಾ.11ರಂದು ಕಿದುವಿನಲ್ಲಿ ನಡೆಯುವ ರೈತ ಸಮ್ಮೇಳನವನ್ನು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಕಿದುವಿನಲ್ಲಿ ನೀರಾವರಿ ಮೂಲಸೌಕರ್ಯಕ್ಕೆ ಪೂರಕವಾಗಿ 20 ಲಕ್ಷ ಲೀಟರ್ ಸಾಮಾರ್ಥ್ಯದ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣಗೊಂಡಿದ್ದು ಸಚಿವೆ ಶೋಭಾ ಕರಂದ್ಲಾಜೆ ಲೋಕಾರ್ಪಣೆ ಮಾಡಲಿದ್ದಾರೆ ಎಂದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ರೈತ ಸಮ್ಮೇಳನದಲ್ಲಿ ಅಡಿಕೆ, ತೆಂಗು ಮತ್ತು ಕೊಕ್ಕೋ ಬೆಳೆಗಳ ಇತ್ತೀಚಿನ ಪ್ರಮುಖ ಕೀಟಗಳು ಹಾಗೂ ರೋಗಗಳ ವೈಜ್ಞಾನಿಕ ನಿರ್ವಹಣೆಯ ಬಗ್ಗೆ ಜಾಗೃತಿ, ರೈತ ಬೆಂಬಲ ಯೋಜನೆಗಳು/ ಉಪಕ್ರಮಗಳು, ಮಣ್ಣಿನ ಆರೋಗ್ಯ ನಿರ್ವಹಣೆ, ಕೋಕ್ಕೋವನ್ನು ಅಂತರ ಬೆಳೆಯಾಗಿ ಬೆಳೆಯುವುದರ ಅನುಕೂಲಗಳು, ರೈತ-ವಿಜ್ಞಾನಿ ಸಮಾವೇಶ ಕಾರ್ಯಗಳು ಮುಂತಾದ ತಾಂತ್ರಿಕ ಉಪನ್ಯಾಸ ನಡೆಯಲಿದೆ. ಸಂಸ್ಥೆಯ ತಂತ್ರಜ್ಞಾನ ಗಳ ಪ್ರದರ್ಶನ ನಡೆಯಲಿದೆ ಎಂದರು.
ಸಿಪಿಸಿಆರ್ಐ ಕಾಸರಗೋಡಿನ ಡಾ.ನಿರಲ್, ಸಿಪಿಸಿಆರ್ಐ ವಿಟ್ಲದ ಡಾ.ವಿನಾಯಕ ಹೆಗ್ಡೆ, ಕಾಸರಗೋಡು ಸಿಪಿಸಿಆರ್ಐ ಪ್ರಧಾನ ವಿಜ್ಞಾನಿಗಳಾದ ಡಾ.ರವಿ ಭಟ್, ಡಾ.ಸಂಶುದ್ದೀನ್, ಪ್ರಮುಖರಾದ ಶ್ಯಾಮ್ ಪ್ರಸಾದ್, ಗೋಪಾಲಕೃಷ್ಣ, ಡಾ.ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.














