ಸುಳ್ಯ:ಸುಳ್ಯದಲ್ಲಿ ಕಳೆದ ಚುನಾವಣೆಯ ಸಂದರ್ಭ ಹಾಗೂ ಚುನಾವಣಾ ಸೋಲಿನ ಬಳಿಕ ತಾರಕಕ್ಕೆ ಏರಿದ್ದ ಸುಳ್ಯದ ಕಾಂಗ್ರೆಸ್ನಲ್ಲಿನ ಗೊಂದಲ, ಭಿನ್ನಮತದ ಹಿನ್ನಲೆಯಲ್ಲಿ ಇಂದು ಸುಳ್ಯದಲ್ಲಿ ನಡೆದ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಸಭೆಯು ಒಗ್ಗಟ್ಟಿನ ಮಂತ್ರ ಜಪಿಸಿ ಮುಕ್ತಾಯಗೊಂಡಿತು. ತೀವ್ರ ಕುತೂಹಲ ಕೆರಳಿಸಿದ್ದ ಸಭೆಯಲ್ಲಿ ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ಕೆಲಸ ಮಾಡಲು ನಿರ್ದೇಶನ ನೀಡಲಾಯಿತು. ಸಭೆಯಲ್ಲಿ ಹಲವು ಮಂದಿ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು
ಮಂಡಿಸಿದರು.ಕಾರ್ಯಕರ್ತರ ಅಸಮಾಧಾನ, ಆಕ್ರೋಶಕ್ಕೆ ಸಭೆ ಸಾಕ್ಷಿಯಾದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಸಭೆ ಸೂಚನೆ ನೀಡಿತು. ಸಭೆಯ ಕೊನೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ತದ ಉಸ್ತುವಾರಿ ಮಮತಾ ಗಟ್ಟಿ ‘ ಸುಳ್ಯದಲ್ಲಿ ಎಲ್ಲರೂ ಒಟ್ಟಾಗಿದ್ದಾರೆ. ಎಲ್ಲಾ ನಾಯಕರು, ಕಾರ್ಯಕರ್ತರು ಒಟ್ಟಾಗಿ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಇಲ್ಲಿನ ಒಗ್ಗಟ್ಟಿನ ಸಂದೇಶ ರಾಜ್ಯಕ್ಕೆ ಮುಟ್ಟಬೇಕು ಎಂದು ಹೇಳಿದರು. ಹಲವು ಮಂದಿ ನಾಯಕರು, ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪಕ್ಷದ ಸಂಘಟನೆಯ ದೃಷ್ಠಿಯಿಂದ, ಮುಂದಿನ ಚುನಾವಣಾ ಗೆಲುವಿನ ದೃಷ್ಠಿಯಿಂದ ಸಲಹೆ ನೀಡುವಂತೆ ಮಮತಾ ಗಟ್ಟಿ ಸೂಚನೆ ನೀಡಿದ್ದರು.

ಕೆ.ಗೋಕುಲ್ದಾಸ್ ಮಾತನಾಡಿ ‘ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಬಂದರೆ ಮಾತ್ರ ಪಕ್ಷ ಉಳಿಯಲು ಸಾಧ್ಯ ಎಂದರು. ನಿಷ್ಠಾವಂತ ಕಾರ್ಯಕರ್ತರನ್ನು ಸೇರಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪುನಃ ಸಂಘಟಿಸಬೇಕು ಎಂದರು.
ನಂದರಾಜ ಸಂಕೇಶ ಮಾತನಾಡಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಸ್ಥಳೀಯ ಅಭ್ಯರ್ಥಿಗಳಿಗೆ ಮತ್ತು ಕಾರ್ಯಕರ್ತರ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದರು.
ತೇಜಕುಮಾರ್ ಬಡ್ಡಡ್ಕ ಮಾತನಾಡಿ’ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಬದಲಾವಣೆ ಅಗತ್ಯ.ಈ ರೀತಿ ಮುಂದುವರಿದರೆ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮಾತನಾಡಿ ‘ಪಕ್ಷದಲ್ಲಿ ದುಡಿಯುವವರಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ’ ನಿಷ್ಠಾವಂತ ಕಾರ್ಯಕರ್ತರನ್ನು ಉಚ್ಚಾಟಿಸಿದ್ದು ಯಾವ ಮಾನದಂಡದ ಮೇಲೆ, ಅದಕ್ಕೆ ಶಿಫಾರಸ್ಸು ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಪಕ್ಷದಲ್ಲಿರುವ ಭಿನ್ನಮತ, ಅಪಸ್ಚರ ಮೊದಲು ಸರಿಪಡಿಸಬೇಕು ಎಂದು ಲಕ್ಷ್ಮಣ ಬೊಳ್ಖಾಜೆ ಹೇಳಿದರು.
ಸಚಿನ್ರಾಜ್ ಶೆಟ್ಟಿ ಮಾತನಾಡಿ 23 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ತನ್ನನ್ನು ಯಾವ ಆಧಾರದಲ್ಲಿ ಉಚ್ಚಾಟನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಭವಾನಿಶಂಕರ ಕಲ್ಮಡ್ಕ ಮಾತನಾಡಿ’ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರು ನೇಮಕ ಆಗಿರುವುದು ಹೇಗೆ, ತಮ್ಮನ್ನು ಅಮಾನತು ಮಾಡಿರುವುದು ಯಾವ ಆಧಾರದಲ್ಲಿ ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ಸೋಮಶೇಖರ ಕೊಯಿಂಗಾಜೆ ಮಾತನಾಡಿ ‘ಪಕ್ಷ ವಿರೋಧಿ ಚಟುವಟಿಕೆ, ಅಶಿಸ್ತು ಉಂಟಾದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಆದರೆ ನಿಷ್ಠಾವಂತ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ಸರಿಯಲ್ಲ ಎಂದರು. ಸಂಪಾಜೆ ಕಾಂಗ್ರೆಸ್ನಲ್ಲಿ ಉಂಟಾದ ಗೊಂದಲಗಳ ಬಗ್ಗೆ ಪ್ರಸ್ತಾಪಿಸಿ ಸಂಪಾಜೆಯಲ್ಲಿನ ಎಲ್ಲಾ ವಿಚಾರಗಳನ್ನು ಬ್ಲಾಕ್ ಕಾಂಗ್ರೆಸ್ ಗಮನಕ್ಕೆ ತರಲಾಗಿದೆ. ಸಂಪಾಜೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಆದರೆ ಅದಕ್ಕೆ ಎಲ್ಲರೂ ಜವಾಬ್ದಾರರು ಎಂದರು.
ಎಂ.ವೆಂಕಪ್ಪ ಗೌಡ ಮಾತನಾಡಿ ‘ಚುನಾವಣಾ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ದುಡಿದರೂ ತನಗೆ ಶೋಕಾಸ್ ನೋಟೀಸ್ ಬಂದದ್ದು ನೋವು ತಂದಿದೆ. ನಾನು ಚುನಾವಣೆಯಲ್ಲಿ ಡಬಲ್ ಗೇಮ್ ಮಾಡಿದ್ದೇನೆ ಎಂದು ನಿಮಗೆ ಅನ್ನಿಸುತ್ತದಾ ಎಂದು ವೆಂಕಪ್ಪ ಗೌಡರು ಪ್ರಶ್ನಿಸಿದರು. ಶೋಕಾಸ್ ನೋಟೀಸ್ ಹಾಗೂ ಕೆಲವು ಕಾರ್ಯಕರ್ತರಿಗೆ ಅಮಾನತು ಆದೇಶದ ವಿಚಾರವವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಯಿತು. ಕೆಪಿಸಿಸಿ ಅಧ್ಯಕ್ಷರು ಅದನ್ನು ಹಿಂಪಡೆಯಲು ಸೂಚಿಸಿದ್ದಾರೆ ಎಂದರು.
ಲಕ್ಷ್ಮೀಶ ಗಬ್ಬಲಡ್ಕ, ಬಶೀರ್ ಅಹಮ್ಮದ್, ಜಂಶೀರ್ ಮತ್ತಿತರರು ಮಾತನಾಡಿದರು.
ಕಾರ್ಯಕರ್ತರು ಮಂಡಿಸಿದ ಎಲ್ಲಾ ಅಹವಾಲುಗಳನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಪರಿಹಾರ ಒದಗಿಸಲಾಗುವುದು ಎಂದು ಮಮತಾ ಗಟ್ಟಿ ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸ್ವಾಗತಿಸಿದರು.
ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್, ಮುಖಂಡರಾದ ಜಿ.ಕೃಷ್ಣಪ್ಪ, ರಾಜೀವಿ ಆರ್ ರೈ, ಶುಭಾಶ್ಚಂದ್ರ ಶೆಟ್ಟಿ, ಸದಾನಂದ ಮಾವಜಿ, ಪಿ.ಎಸ್.ಗಂಗಾಧರ, ಕಳಂಜ ವಿಶ್ವನಾಥ ರೈ, ವಿವಿಧ ಘಟಕಗಳ ಅಧ್ಯಕ್ಷರಾದ ಗೀತಾ ಕೋಲ್ಚಾರ್, ಸುರೇಶ್ ಅಮೈ, ಶಾಫಿ ಕುತ್ತಮೊಟ್ಟೆ, ಹಮೀದ್ ಕುತ್ತಮೊಟ್ಟೆ, ಇಸ್ಮಾಯಿಲ್ ಪಡ್ಪಿನಂಗಡಿ, ಪರಮೇಶ್ವರ ಕೆಂಬಾರೆ, ಜಯಪ್ರಕಾಶ್ ನೆಕ್ರಪ್ಪಾಡಿ, ದಿನೇಶ್ ಅಂಬೆಕಲ್ಲು ಉಪಸ್ಥಿತರಿದ್ದರು. ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆಯ ಹಿನ್ನಲೆಯಲ್ಲಿ ಸಭೆ ಕರೆಯಲಾಗಿತ್ತು.
ಶೋಕಾಸ್ ನೋಟೀಸ್ ಪಡೆದ ಹಾಗೂ ಅಮಾನತು, ಉಚ್ಚಾಟನೆ ಆದೇಶ ಪಡೆದ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಶೋಕಾಸ್ ನೋಟೀಸ್ ಪಡೆದ ಎಂ.ವೆಂಕಪ್ಪ ಗೌಡ, ಅಮಾನತು, ಉಚ್ಚಾಟನೆ ಆದೇಶ ಪಡೆದ ಮಹೇಶ್ ಭಟ್ ಕರಿಕ್ಕಳ, ಕೆ.ಗೋಕುಲ್ದಾಸ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಶಶಿಧರ ಎಂ.ಜೆ, ಸಂಪಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಸಭೆಯಲ್ಲಿ ಭಾಗವಹಿಸಿದ್ದರು.
ಶೋಕಾಸ್ ನೋಟೀಸ್, ಅಮಾನತು, ಉಚ್ಚಾಟನೆ ಆದೇಶಗಳು ಮುಗಿದ ಅಧ್ಯಾಯ ಎಂದು ಮುಖಂಡರು ಹೇಳಿದರು.