ಸುಳ್ಯ: ಫೆ.17 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿರುವ ಕಾಂಗ್ರೆಸ್ ರಾಜ್ಯ ಮಟ್ಟದ ಸಮಾವೇಶಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದಿಂದ 5 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ಕ್ಷೇತ್ರದ ಕೆಪಿಸಿಸಿ ಉಸ್ತಿವಾರಿ ಮಮತಾ ಗಟ್ಟಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ಸಮಾವೇಶದಲ್ಲಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯದ ಎಲ್ಲಾ ಸಚಿವರುಗಳು, ಎಐಸಿಸಿ, ಕೆಪಿಸಿಸಿ ಮುಖಂಡರು ಭಾಗವಹಿಸಲಿದ್ದಾರೆ. ಲೋಕಸಭೆ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಸಿದ್ಧತೆಯ ಹಿನ್ನಲೆಯಲ್ಲಿ ಈ ಸಮಾವೇಶ ನಡೆಯಲಿದೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಜಿಲ್ಲೆಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಸಾಧನೆ ತೃಪ್ತಿಕರವಾಗಿಲ್ಲ. ಸಮಾವೇಶದ ಮೂಲಕ ಮತ್ತೆ ಪಕ್ಷ ಸಂಘಟನೆ ಗಟ್ಟಿಯಾಗಲಿದೆ ಎಂದರು. ಸಮಾವೇಶಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ. ಪ್ರತಿ ಬ್ಲಾಕ್, ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಸುಳ್ಯ ಕ್ಷೇತ್ರದಿಂದ 5 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸುಳ್ಯದಿಂದ 25 ಬಸ್ ಹಾಗೂ ಕಡಬದಿಂದ 20 ಬಸ್ ಹಾಗೂ ಇತರ ವಾಹನಗಳಲ್ಲಿ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ.ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ. ಇದು ಮುಂದಿನ ಚುನಾವಣೆಯಲ್ಲಿ ಪ್ರತಿಫಲಿಸಲಿದೆ ಎಂದು ಮಮತಾ ಗಟ್ಟಿ ಹೇಳಿದರು.

ಸಮಾವೇಶದ ಮಾಧ್ಯಮ ವಿಭಾಗದ ಸಂಚಾಲಕರು ಹಾಗೂ ಸುಳ್ಯ ಕ್ಷೇತ್ರದ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ ಮಾತನಾಡಿ’ ಸಮಾವೇಶದ ಯಶಸ್ವಿಗಾಗಿ ಎಲ್ಲಾ ಪ್ರಯತ್ನಗಳನ್ನೂ ನಡೆಸಿದೆ. ಜಿಲ್ಲಾ ಕಾಂಗ್ರೆಸ್ ನೇತೃತ್ವ ಸಮಾವೇಶವನ್ನು ಗಂಭೀರವಾಗಿ ಪರಿಗಣಿಸಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಜಿಲ್ಲೆಗಳಿಂದ ಕಾರ್ಯಕರ್ತರು ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಮಗ್ರ ಕರ್ನಾಟಕದ ಅಭಿವೃದ್ಧಿಯ ಬಜೆಟ್ ನಿರೀಕ್ಷೆ:ಮುಂಡೋಡಿ
ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ ಮಾತನಾಡಿ ಕರಾವಳಿ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಬಜೆಟನ್ನು ಮುಖ್ಯಮಂತ್ರಿಯವರು ಮಂಡಿಸಲಿದ್ದಾರೆ ಎಂದು ಹೇಳಿದರು. ಕರಾವಳಿ ಅಭಿವೃದ್ಧಿಗೆ ಘೋಷಣೆ ಮಾಡಿದ ಪ್ರತ್ಯೇಕ ಪ್ರಣಾಳಿಕೆ ಸೇರಿ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಅಂಶವನ್ನೂ ಸರಕಾರ ಅನುಷ್ಠಾನ ಮಾಡಲಿದೆ ಎಂದು ಅವರು ಹೇಳಿದರು. ಸುಳ್ಯದ ಅಭಿವೃದ್ಧಿಗೆ ವಿಶೇಷ ಅನುದಾನ ತರುವ ಎಲ್ಲಾ ಪ್ರಯತ್ನ ನಡೆಸಲಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ ಅಡಿಕೆಯ ದರ ದಿನದಿಂದ ದಿನಕ್ಕೆ ಕುಸಿಯುತಿದೆ. ಇದು ಕೃಷಿಕರಲ್ಲಿ ಆತಂಕ ಸೃಷ್ಠಿಸಿದೆ. ವಿದೇಶದಿಂದ ಅಡಿಕೆ ಬರುವುದು ಇದಕ್ಕೆ ಕಾರಣ. ವಿದೇಶದಿಂದ ಬರುವ ಅಡಿಕೆಗೆ ತಡೆ ಒಡ್ಡಿ ಅಡಿಕೆಯ ಆಂತರಿಕ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಅಮೈ ಉಪಸ್ಥಿತರಿದ್ದರು.








