ಸುಳ್ಯ: ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುಳ್ಯ, ಕೃಷಿಕ ಸಮಾಜ ಸುಳ್ಯ, ಐಸಿಎಆರ್- ಸಿಪಿಸಿಆರ್ಐ, ನಬಾರ್ಡ್, ಬ್ರೌನ್ ಗೊಲ್ಡ್ ಕೊಕ್ಕೋ ಪ್ರೊಡ್ಯೂಸರ್ ಕಂಪನಿ ಸಂಯುಕ್ತ ಆಶ್ರಯದಲ್ಲಿ ಕೊಕ್ಕೋ ಬೆಳೆಯ ಸಮರ್ಪಕ ನಿರ್ವಹಣೆ ಕುರಿತು ವಿಚಾರ ಸಂಕಿರಣ ಸುಳ್ಯ ಸಿಎ ಬ್ಯಾಂಕ್ ದಿ.ಎ.ಎಸ್. ವಿಜಯ ಕುಮಾರ್ ಸಭಾ ಭವನದಲ್ಲಿ ನಡೆಯಿತು.ವಿಟ್ಲ ಐಸಿಎಆರ್- ಸಿಪಿಸಿಆರ್ಐ ಪ್ರಾದೇಶಿಕ ಸಂಸ್ಥೆಯ
ಮುಖ್ಯಸ್ಥ ಡಾ.ಎಂ.ಕೆ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.ಕೊಕ್ಕೋ ಬೆಳೆಯನ್ನು ಸಮರ್ಪಕ ರೀತಿಯಲ್ಲಿ ಬೆಳೆ ಯುವುದರಿಂದ ಉತ್ತಮ ಗಳಿಕೆ ಸಾಧ್ಯವಿದೆ. ಕೇಂದ್ರ ಬಜೆಟ್ನಲ್ಲೂ ಕೊಕ್ಕೋ ಬೆಳೆಗೆ ಪ್ರೋತ್ಸಾಹ ನೀಡುವ ಬಗ್ಗೆ ಉಲ್ಲೇಖಿಸಿರುವುದು ಕೃಷಿಕರಿಗೆ ಬಲ ನೀಡಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ವಿಟ್ಲ ಐಸಿಎಆರ್-ಸಿಪಿಸಿಆರ್ಐ ಪ್ರಧಾನ ವಿಜ್ಞಾನಿ ಡಾ. ಎಲೈನ್ ಅಪ್ಸರಾ, ಕೊಕ್ಕೋ ಬೇಡಿಕೆ ಹೆಚ್ಚಿದ್ದು, ಆದರೆ ನಮ್ಮಲ್ಲಿ ಬೇಡಿಕೆಯಷ್ಟು ಉತ್ಪಾದನೆ ಇಲ್ಲ. ಆದ್ದರಿಂದ ಕೊಕ್ಕೊದಿಂದ ಇನ್ನಷ್ಟು ಆದಾಯ ಗಳಿಕೆ ಸಾಧ್ಯವಿದೆ. ಉತ್ತಮ ಗುಣಮಟ್ಟದ,ಆರೋಗ್ಯಕರ ಕೊಕ್ಕೋ ಬೆಳೆಯುವುದು ನಮ್ಮ ಆದ್ಯತೆಯಾಗಬೇಕು ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ವಿಟ್ಲ ಐಸಿಎಆರ್- ಸಿಪಿಸಿಆರ್ಐ ವಿಜ್ಞಾನಿ ಡಾ. ಭವಿಷ್ಯ ಮಾತನಾಡಿ, ಸುಸ್ಥಿರ ಕೃಷಿ ಮೂಲಕ ಹೆಚ್ಚುವರಿ ಇಳುವರಿ ಪಡೆಯಬಹುದು. ಕೊಕ್ಕೋ ಅಡಿಕೆ ಬೆಳೆಯೊಂದಿಗೆ ಬೆಳೆಯುವುದರಿಂದ ಅಡಿಕೆಗೆ ಬೇಕಾಗುವ ಮಣ್ಣಿನ ಪೋಷಕಾಂಶ ಕೊಕ್ಕೋದಿಂದ ಲಭಿಸುತ್ತದೆ.ಕೊಕ್ಕೋಗೆ ಬಾಧಿಸುವ ರೋಗಗಳ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು ಎಂದರು.
ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಕ್ರಮ್ ಎ.ವಿ., ಸುಳ್ಯ ಕೃಷಿ ಸಮಾಜ ಅಧ್ಯಕ್ಷ ಕುಸುಮಾಧರ ಎ.ಟಿ., ಬ್ರೌನ್ ಗೋಲ್ಡ್ ಕೋಕೋ ಪ್ರೊಡ್ಯೂಸರ್ ಕಂಪೆನಿ ಅಧ್ಯಕ್ಷ ಕೆ.ಜೆ. ವರ್ಗೀಸ್, ಕಾರ್ಯನಿರ್ವಾಹಕ ನಿರ್ದೇಶಕ ಟೋಮ್ ಜಾರ್ಜ್, ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಹರೀಶ್ ಬೂಡುಪನ್ನೆ ಮತ್ತಿತರರು ಇದ್ದರು. ವಿಜ್ಞಾನಿಗಳಾದ ಡಾ. ಭವಿಷ್ಯ ಸ್ವಾಗತಿಸಿ, ಡಾ. ಅನೆಸ್ ಕೆ.ಎಂ. ವಂದಿಸಿದರು.














