ಚೆನ್ನೈ:ಭಾರೀ ಮಳೆಗೆ ಚೆನ್ನೈ ನಗರ ಅಕ್ಷರಷಃ ತತ್ತರಿಸಿದೆ. ನಗರದ ಹಲವು ತಗ್ಗು ಪ್ರದೇಶಗಳು ಮಳೆ ನೀರಿನಿಂದ ಜಲಾವೃತವಾಗಿವೆ. ನಗರ ಉತ್ತರ ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.ಅ.14ರ ಸಂಜೆ 6 ಗಂಟೆಯಿಂದ ಅ.15ರ ಸಂಜೆ 6 ಗಂಟೆಯವರೆಗೆ ಚೆನ್ನೈನಲ್ಲಿ ಸುಮಾರು 10 ಸೆ.ಮೀನಷ್ಟು ಮಳೆ ಸುರಿದಿದೆ. ಹಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣವು
15 ಸೆ.ಮೀನಷ್ಟಿತ್ತು.ನಗರ ಹಲವು ಮುಖ್ಯ ರಸ್ತೆಗಳು ಜಲಾವೃತಗೊಂಡಿದ್ದವು. ಅಕ್ಟೋಬರ್ನಲ್ಲಿ ಪ್ರತಿವರ್ಷ ಸುರಿಯುವ ಮಳೆಗೆ ಚೆನ್ನೈನ ಉತ್ತರ ಭಾಗದ ವೆಲಚೇರಿ ಮತ್ತು ಪಾಲಿಕರಣೈ ಪ್ರದೇಶಗಳ ಜನರು ತೀವ್ರ ಸಂಕಷ್ಟ ಎದುರಿಸುತ್ತಾರೆ. ಮಂಗಳವಾರ ಸುರಿದ ಮಳೆಯೂ ಈ ಪ್ರದೇಶಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಚೆನ್ನೈ ತಿರುವೆಳ್ಳೂರು ಕಾಂಚೀಪುರ ಹಾಗೂ ಚಂಗ್ಲಪಟ್ಟು ಜಿಲ್ಲೆಗಳಲ್ಲಿ ’ರೆಡ್ ಅಲರ್ಟ್‘ ಘೋಷಿಸಿದ್ದು ಈ ಪ್ರದೇಶಗಳ ಶಾಲಾ–ಕಾಲೇಜು ಸರ್ಕಾರ ಹಾಗೂ ಖಾಸಗಿ ಕಚೇರಿಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ
ಚೆನ್ನೈನ ಹಲವು ಭಾಗಗಳಲ್ಲಿ ಬಸ್ ಸಂಚಾರ ವ್ಯತ್ಯಯವಾಗಿದ್ದವು. ಕೆಲವು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಮಂಗಳವಾರ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ತಮಿಳುನಾಡಿನಲ್ಲಿ ತೀವ್ರ ಮಳೆಯಾಗಿದೆ. ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಹಾಗೂ ಪುದುಚೆರಿಯಲ್ಲಿಯೂ ತೀವ್ರ ಮಳೆಯಾಗಿದೆ. ‘ವಾಯುಭಾರ ಕುಸಿತವು ಇನ್ನಷ್ಟು ತೀವ್ರಗೊಳ್ಳಲಿದ್ದು ಇನ್ನೆರಡು ದಿನಗಳಲ್ಲಿ ತಮಿಳುನಾಡು ಆಂಧ್ರ ಪ್ರದೇಶದ ದಕ್ಷಿಣ ಭಾಗಗಳಲ್ಲಿ ಹಾಗೂ ಪುದುಚೆರಿಯಲ್ಲಿ ತೀವ್ರ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.