ಸುಳ್ಯ: ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದ ಕಾರಣ ಒಬ್ಬ ಮೃತಪಟ್ಟು 3 ಮಂದಿ ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಅಡ್ಕಾರಿನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಒಬ್ಬರು ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಡ್ಕಾರಿನ ಹೊಟೇಲ್ ಒಂದರ ಮುಂಭಾಗದಲ್ಲಿ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಹುಣಸೂರು ಕಡೆಯಿಂದ ಮಂಗಳೂರಿಗೆ
ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಒಬ್ಬರು ಮೃತಪಟ್ಟು 3 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರು ಕೆಲಸದ ನಿಮಿತ್ತ ಅಡ್ಕಾರಿಗೆ ಆಗಮಿಸಿದ್ದರು. ಕಾರ್ಮಿಕರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಂತಿದ್ದ ಲಾರಿಗೂ ಕಾರು ಡಿಕ್ಕಿ ಹೊಡೆಯಿತು. ಗಾಯಗೊಂಡ ಕಾರ್ಮಿಕರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ