ಸುಳ್ಯ:ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ(ಸಿ.ಎ ಬ್ಯಾಂಕ್) ಶತಮಾನೋತ್ತರ ದಶಮಾನೋತ್ಸವ ಸಮಾರಂಭ ಹಾಗೂ ಸುಮಾರು ಮೂರುವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ಸಿ.ಎ. ಬ್ಯಾಂಕ್ ಕಾಂಪ್ಲೆಕ್ಸ್ ಇದರ ಲೋಕಾರ್ಪಣಾ ಕಾರ್ಯಕ್ರಮ ಎ.12ರಂದು ನಡೆಯಲಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸುವರು. ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಡಂಗಾಯ ಅಧ್ಯಕ್ಷತೆ ವಹಿಸುವರು.ದ.ಕ. ಲೋಕಸಭಾ ಕ್ಷೇತ್ರದ
ಸಂಸದರಾದ ಕ್ಯಾ .ಬ್ರಿಜೇಶ್ ಚೌಟ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಡಿ.ವಿಸದಾನಂದ ಗೌಡರು ಭದ್ರತಾ ಕೊಠಡಿ ಮತ್ತು ಲಿಫ್ಟ್ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಆಡಳಿತ ಮಂಡಳಿಯ ಸಭಾಭವನ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಅಂಗಾರ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ. ರೇಣುಕಾ ಪ್ರಸಾದ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಸುಳ್ಯ ನ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ. ನೀರಬಿದಿರೆ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ. ರಘು, ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ ದೇವಕಿ ವಿಷ್ಣುನಗರ ಭಾಗವಹಿಸಲಿದ್ದಾರೆ.

ಸಂಘ ನಡೆದು ಬಂದ ಹಾದಿ:
ಸುಳ್ಯ ಸಹಕಾರಿ ವ್ಯವಸಾಯಿಕ ಸಂಘವು ದ.ಕ. ಜಿಲ್ಲೆಯ ಸಹಕಾರಿ ಪಿತಾಮಹ ಎನಿಸಿಕೊಂಡ ದ.
ಮೊಳಹಳ್ಳಿ ಶಿವರಾಯರ ನಿರ್ದೇಶನದಲ್ಲಿ ದಿ. ಐತ್ತಪ್ಪ ರೈಯವರ ಮುಂದಾಳುತನದಲ್ಲಿ 17.02.1914ರಲ್ಲಿ 24 ಸದಸ್ಯರನ್ನೊಳಗೊಂಡು ರೂ.300 ಕ್ಕೂ ಕಡಿಮೆ ಪಾಲು ಬಂಡವಾಳದಲ್ಲಿ ಸ್ಥಾಪಿಸಲ್ಪಟ್ಟಿತು. ಸುಳ್ಯ ಮತ್ತು ಅಜ್ಜಾವರ ಗ್ರಾಮ ಕಾರ್ಯವ್ಯಾಪ್ತಿಯನ್ನೊಳಗೊಂಡ ಸಹಕಾರಿ ಸಂಘವು ಗ್ರಾಮಾಂತರ ಜನರ ಆಶೋತ್ತರಗಳನ್ನು ಈಡೇರಿಸುವ ದೃಷ್ಟಿಯಿಂದ ಜನರಿಗೆ ಎಲ್ಲಾ ತರಹದ ಆಧುನಿಕ ಆರ್ಥಿಕ ಸೌಲಭ್ಯಗಳನ್ನು ಒದಗಿಸುತ್ತಿದ್ದು ವಾರ್ಷಿಕ 300 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸುತ್ತಿರುವ ಸಂಸ್ಥೆಯಾಗಿದೆ. ಇದೀಗ 110 ವರ್ಷಗಳನ್ನು ಪೂರೈಸುತ್ತಿರುವ ಸಹಕಾರಿ ಸಂಘದ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು ಆ ಪ್ರಯುಕ್ತ ನೂತನ ಕಟ್ಟಡ ಲೋಕಾರ್ಪಣೆಯೊಂದಿಗೆ – ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.
ಮೂರೂವರೆ ಕೋಟಿ ವೆಚ್ಚದ ಸಿಎ ಬ್ಯಾಂಕ್ ಕಾಂಪ್ಲೆಕ್ಸ್:
ಸುಮಾರು ಮೂರುವರೆ ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ‘ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್’ ನ್ನು ನಿರ್ಮಿಸಲಾಗಿದ್ದು ಎಲ್ಲಾ ರೀತಿಯ ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮೂರು ಮಹಡಿಯ ಈ ಕಟ್ಟಡದಲ್ಲಿ ನೆಲಮಹಡಿಯಲ್ಲಿ ಸುಸಜ್ಜಿತ ರಸಗೊಬ್ಬರ ದಾಸ್ತಾನು ವ್ಯವಸ್ಥೆ ಮತ್ತು ಮಾರಾಟ ವಿಭಾಗವನ್ನು ತೆರೆಯಲಾಗಿದೆ. ಮೊದಲನೇ . ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಬಾಡಿಗೆಗೆ ವ್ಯವಹಾರದ ಅಂಗಡಿ ಕೊಠಡಿ ಗಳಿಗೆ ಅವಕಾಶ ನೀಡಲಾಗಿದೆ. ಎರಡನೇ ಮಹಡಿಯಲ್ಲಿ ಸುಸಜ್ಜಿತ ಸಿ.ಎ. ಬ್ಯಾಂಕ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮಾಡಲು ಎಲ್ಲಾ

ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮೂರನೇ ಮಹಡಿಯಲ್ಲಿ ಆಧುನಿಕ – ವಿನ್ಯಾಸದ ಸುಮಾರು 400 ಮಂದಿ ಕುಳಿತುಕೊಳ್ಳುವ ಸುಸಜ್ಜಿತ ಸಭಾಭವನ ವ್ಯವಸ್ಥೆಯನ್ನು ಮಾಡಲಾಗಿದೆ. ಕಟ್ಟಡಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, 10 ಮಂದಿ ಏಕ ಕಾಲಕ್ಕೆ ಹೋಗಬಹುದಾದ ಲಿಫ್ಟ್ ವ್ಯವಸ್ಥೆಯೊಂದಿಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಕಾಲು ದಾರಿಗೆ ಇಂಟರ್ ಲಾಕ್:
ಸಿ.ಎ. ಬ್ಯಾಂಕ್ ಹಾಗೂ ಸೂಂತೋಡು ಎಂಪೋರಿಯಮ್ನ ಪಕ್ಕದಲ್ಲಿ ನಡೆದುಕೊಂಡು ಹೋಗಲು ಕಾಲು ದಾರಿಯೊಂದು ಇದ್ದು ಅದಕ್ಕೆ ಸಿ.ಎ. ಬ್ಯಾಂಕ್ ವತಿಯಿಂದ ಇಂಟರ್ ಲಾಕ್ ಅಳವಡಿಸಲಾಗಿದೆ. ಮಳೆ ನೀರು ಚರಂಡಿಯಲ್ಲೇ ಹೋಗುವಂತೆ ಮೋರಿ ನಿರ್ಮಿಸಲಾಗಿದೆ. ಈ ವ್ಯವಸ್ಥೆಯನ್ನು ಸಾರ್ವಜನಿಕರಿಗಾಗಿ ಸಿ.ಎ. ಬ್ಯಾಂಕ್ ವತಿಯಿಂದ ಕೊಡುಗೆ ನೀಡಲಾಗಿದ್ದು ಇದರ ಉದ್ಘಾಟನೆಯೂ ನಡೆಯಲಿದೆ.
‘ನಮ್ಮ ಸಂಸ್ಥೆ ಆರಂಭಗೊಂಡು 110 ವರ್ಷವಾಗುತ್ತಿದೆ. ಇದುವರೆಗೆ ಜನರಿಗೆ ಅತ್ಯುತ್ತಮ ಸೇವೆಯನ್ನು ನೀಡಿದ್ದೇವೆ. ಈ ಹಿಂದೆ ಇಲ್ಲಿ ಆಡಳಿತ ನಡೆಸಿದ ಆಡಳಿತ ಮಂಡಳಿಯ ಅಧ್ಯಕ್ಷರುಗಳು ಹಾಗೂ ನಿರ್ದೇಶಕರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯುತ್ತಿದ್ದು ಎಲ್ಲರ ಸಹಕಾರ, ಸಲಹೆಯಂತೆ ಅತ್ಯುತ್ತಮ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಯಶಸ್ವಿಗೊಳಿಸಬೇಕು ಎಂದು ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಡಂಗಾಯ ವಿನಂತಿಸಿದ್ದಾರೆ.