ನವದೆಹಲಿ: ಏಳು ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆಲ್ಲುವ ಮೂಲಕ ‘ಇಂಡಿಯಾ’ ಬಣದ ಪಕ್ಷಗಳು ಮೇಲುಗೈ ಸಾಧಿಸಿವೆ. ಎನ್ಡಿಎ 2 ಕಡೆ ಜಯ ಸಾಧಿಸಿದ್ದರೆ, ಇನ್ನೊಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.
ಪಶ್ಚಿಮ ಬಂಗಾಳದ 4, ಹಿಮಾಚಲ ಪ್ರದೇಶದ 3, ಉತ್ತರಾಖಂಡದ 2 ಹಾಗೂ
ಪಂಜಾಬ್, ಮಧ್ಯಪ್ರದೇಶ, ಬಿಹಾರ, ತಮಿಳುನಾಡಿನ ತಲಾ 1 ಕ್ಷೇತ್ರಗಳಿಗೆ ಜುಲೈ 10 ರಂದು ಮತದಾನ ನಡೆದಿತ್ತು. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಇಂಡಿಯಾ ಹಾಗೂ ಎನ್ಡಿಎ ಮೈತ್ರಿ ಪಕ್ಷಗಳ ನಡುವೆ ನೇರ ಹಣಾಹಣಿ ಇತ್ತು’ಇಂಡಿಯಾ’ ಬಣದಿಂದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ಡ್ರಾವೀಡ ಮುನ್ನೇತ್ರ ಕಳಗಂ (ಡಿಎಂಕೆ) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಪಶ್ಚಿಮ ಬಂಗಾಳದ ನಾಲ್ಕೂ ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಹುರಿಯಾಳುಗಳ ಎದುರು ಜಯ ಸಾಧಿಸಿದ್ದಾರೆ. ಹಿಮಾಚಲ ಪ್ರದೇಶದ ಮೂರು ಕ್ಷೇತ್ರಗಳ ಪೈಕಿ ಎರಡು ಕಾಂಗ್ರೆಸ್ ಪಾಲಾಗಿವೆ. ಒಂದು ಸ್ಥಾನ ಬಿಜೆಪಿ ಪಡೆದಿದೆ. ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಎರಡು ಸ್ಥಾನ ಗೆದ್ದಿದ್ದಾರೆ. ಪಂಜಾಬ್ನಲ್ಲಿ ಎಎಪಿಯ ತಮಿಳುನಾಡಿನ ಒಂದು ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಗೆದ್ದಿದ್ದಾರೆ. ಮಧ್ಯಪ್ರದೇಶದ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಬಿಹಾರದ ರೂಪೌಲಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.