ಮಂಗಳೂರು:ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆ ಮಾಡಲು ಸರಕಾರ ರಚಿಸಿರುವ ರಾಜ್ಯ ಸಮಿತಿ ಸದಸ್ಯರಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಹಿರಿಯ ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ. ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿಸಿ ಜಿಲ್ಲಾ ವ್ಯಾಪ್ತಿಯಲ್ಲಿ ಸರಕಾರಿ ಬಸ್ನಲ್ಲಿ ಓಡಾಟ ನಡೆಸಲು ಉಚಿತ ಬಸ್ ಪಾಸ್ ನೀಡುವುದಾಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಆ ಬಳಿಕ ಆದೇಶ ಕೂಡ ಮಾಡಲಾಗಿತ್ತು. ಇದೀಗ ಉಚಿತ ಬಸ್ ಪಾಸ್ ವಿತರಣೆ ಯೋಜನೆ ಅನುಷ್ಠಾನ ಮಾಡಲು ರಾಜ್ಯಮಟ್ಟದ ಆಯ್ಕೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆಯ್ಕೆ ಸಮಿತಿಗೆ ಶ್ರೀನಿವಾಸ ನಾಯಕ್ ಇಂದಾಜೆ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಿ ಆದೇಶ ಮಾಡಿದೆ. ಸಮಿತಿಯಲ್ಲಿ 9 ಮಂದಿ ಸದಸ್ಯರುತ್ತಾರೆ. ಗ್ರಾಮೀಣ ಪತ್ರಕರ್ತರ ಅರ್ಜಿಗಳನ್ನು ಪರಿಶೀಲಿಸಿ ಸೌಲಭ್ಯವನ್ನು ಮಂಜೂರು ಮಾಡಲು ಸಮಿತಿ ರಚಿಸಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಸದಸ್ಯರಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯ ಜಂಟಿ ನಿರ್ದೇಶಕರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಯಾಗಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಬೆಂಗಳೂರು ವರದಿಗಾರರ ಕೂಟದ ಪ್ರತಿನಿಧಿಯಾಗಿ ಹಿರಿಯ ಪತ್ರಕರ್ತ ಎಂ ಚಂದ್ರಶೇಖರ್, ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಪ್ರತಿನಿಧಿಯಾಗಿ ಹೆಚ್.ಎಲ್ ಸುರೇಶ್, ಬೆಂಗಳೂರು ಪೋಟೋ ಜರ್ನಲಿಸ್ಟ್ ಸಂಘದ ಪ್ರತಿನಿಧಿಯಾಗಿ ಮೋಹನ್ ಕುಮಾರ್, ವಿಶೇಷ ಆಮಂತ್ರಿತತ ಪ್ರತಿನಿಧಿಗಳಾಗಿ ಗಂಗಾಧರ್ ಬಂಡಿಹಾಳ್ ಹಾಗೂ ಶ್ರೀನಿವಾಸ ನಾಯಕ್ ಇಂದಾಜೆ ಅವರನ್ನು ಸರಕಾರ ನಾಮ ನಿರ್ದೇಶನ ಮಾಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯ ಉಪ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.