ಸುಳ್ಯ: ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರಿನ ವರೆಗೆ ಮಾತ್ರವೇ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಇದೀಗ ಕಡಮಕಲ್ಲುವರೆಗೂ ತನ್ನ ಸಂಚಾರ ವಿಸ್ತರಿಸಿ ಪುನರಾರಂಭಿಸಿದೆ.
ಈ ಹಿಂದೆ ಕಲ್ಮಕಾರಿಗೆ ಬರುವ ಸರಕಾರಿ ಬಸ್ಗಳು ಕಡಮಕಲ್ಲು ವರೆಗೆಗೂ ಸಂಚರಿಸುತ್ತಿತ್ತು, ಆದರೆ ಕೆಲ ವರ್ಷಗಳಿಂದ ಆ ಬಸ್ ಕಡಮಕಲ್ಲು ವರೆಗೆ
ಸಂಚರಿಸದೇ ಕಲ್ಮಕಾರು ವರೆಗೆ ಮಾತ್ರವೇ ಸಂಚರಿಸುತ್ತಿತ್ತು. ಆದರೆ ಇದೀಗ ಗ್ರಾಮಸ್ಥರ ಮನವಿಯ ಮೇರೆಗೆ ಜಿಲ್ಲಾಧಿಕಾರಿ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳ ನಿರ್ದೇಶನದಂತೆ ಬಸ್ ಕಡಮಕಲ್ಲು ವರೆಗೆ ಸಂಚಾರ ಪುನರಾರಂಭಿಸಿದೆ. ಇತ್ತೀಚೆಗೆ ಕೊಲ್ಲಮೊಗ್ರುವಿನಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಡಮಕಲ್ಲು ವರೆಗೆ ಬಸ್ ವಿಸ್ತರಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕೂಡಲೇ ಸ್ಥಳದಲ್ಲಿದ್ದ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಇದೀಗ ಬಸ್ ಸಂಚಾರ ವಿಸ್ತರಣೆಗೊಂಡಿದೆ. ಹಗಲಿನ ವೇಳೆ ಹೆಚ್ಚುವರಿ ಬಸ್ ಸೇವೆ ಒದಗಿಸಬೇಕು ಎಂಬ ಬೇಡಿಕೆ ಇದೆ.