ಸುಳ್ಯ: ಈಗ ಸಿಕ್ಕಿರುವ ಗೌರವ,ಅವಕಾಶಗಳು ವೈಯುಕ್ತಿಕವಾದ ನೆಲೆಯಲ್ಲಿ ಸಿಕ್ಕಿದ್ದು ಎಂಬ ಭ್ರಮೆ ಖಂಡಿತಾ ಇಲ್ಲ. ಇದು ಬಿಜೆಪಿ ಪಕ್ಷಕ್ಕೆ ಸಿಕ್ಕಿದ ಗೌರವ, ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಸಿಕ್ಕಿದ ಮಾನ್ಯತೆ ಹಾಗೂ ಓರ್ವ ಕಾರ್ಯಕರ್ತನಿಗೆ ಸಿಕ್ಕಿದ ಅವಕಾಶ ಎಂಬ ಅರಿವು ಇದೆ. ಆದುದರಿಂದ ಕಾರ್ಯಕರ್ತರ ಮತ್ತು ಜನರ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.ಸುಳ್ಯ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವ ಅವರು
ಸುಳ್ಯ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಎಲ್ಲರ ಅಭಿಪ್ರಾಯ, ವಿಶ್ವಾಸ ಪಡೆದು ಕೆಲಸ ಮಾಡುತ್ತೇನೆ ಎಂದ ಅವರು ಹಿಂದುತ್ವಕ್ಕೆ ತನ್ನ ಬದ್ಧತೆ ಮತ್ತು ಅಭಿವೃದ್ಧಿಗೆ ಆದ್ಯತೆ ಎಂದು ಹೇಳಿದರು. ವಿಕಸಿತ ಭಾರತದ ನಿರ್ಮಾಣ ನಮ್ಮ ಸಂಕಲ್ಪ ಎಂದರು.

ಚುನಾವಣಾ ಕಚೇರಿ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ‘ ಸುಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ 60 ಸಾವಿರ ಮತಗಳ ಬಹುಮತವನ್ನು ಗಳಿಸಿಕೊಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಎನ್.ಮನ್ಮಥ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಹರೀಶ್ ಕಂಜಿಪಿಲಿ, ಜಿಲ್ಲಾ
ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು, ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಎ.ವಿ.ತೀರ್ಥರಾಮ, ಎಸ್.ಎನ್.ಮನ್ಮಥ, ಸೀತಾರಾಮ ಬೆಳಾಲು, ವೆಂಕಟ್ ದಂಬೆಕೋಡಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.

ದೇವರ ದರ್ಶನ-ಪ್ರಮುಖರ ಭೇಟಿ:
ಬೆಳಿಗ್ಗೆ ಸುಳ್ಯಕ್ಕೆ ಆಗಮಿಸಿದ ಬ್ರಿಜೇಶ್ ಚೌಟ
ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ, ಕಲ್ಕುಡ ದೈವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ಹಳೆ ಬಸ್ ನಿಲ್ದಾಣ ದಲ್ಲಿರುವ ಡಾ. ಕುರುಂಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಅವರು ನಗರ ಪಂಚಾಯತ್ ಮುಂಭಾಗದ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ. ಚಿದಾನಂದ ಕೆ.ವಿ,ಮಾಜಿ ಸಚಿವ ಎಸ್.ಅಂಗಾರ, ಆರ್ಎಸ್ಎಸ್ ತಾಲೂಕು ಸಂಘಚಾಲಕ್ ಚಂದ್ರಶೇಖರ ತಳೂರು ಅವರನ್ನು ಭೇಟಿ ಮಾಡಿದರು.







