ಸುಳ್ಯ: ಸುಳ್ಯದ ಆರಾಧ್ಯ ಕ್ಷೇತ್ರ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಹಾಗೂ ಮನೆಯವರು ನೂತನ ಬ್ರಹ್ಮರಥವನ್ನು ಕೊಡುಗೆಯಾಗಿ ನೀಡಲಿದ್ದಾರೆ. ಬ್ರಹ್ಮರಥ ನಿರ್ಮಾಣ ಕಾರ್ಯ ನಡೆಯುತ್ತಿದ್ದು ರಥ ಸಮರ್ಪಣೆಯ ಸಿದ್ಧತೆಯ ಕುರಿತು ಸಮಾಲೋಚನಾ ಸಭೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.ಕೋಟೇಶ್ವರದ ಕುಂಭಾಶಿಯಲ್ಲಿ
ರಥಶಿಲ್ಪಿ ರಾಜಗೋಪಾಲಾಚಾರ್ಯರ ಉಸ್ತುವಾರಿಯಲ್ಲಿ ಬ್ರಹ್ಮರಥ ನಿರ್ಮಾಣವಾಗುತ್ತಿದ್ದು, ಡಿ.23ರಂದು ಬ್ರಹ್ಮರಥ ಸುಳ್ಯಕ್ಕೆ ತರುವ ನಿಟ್ಟಿನಲ್ಲಿ ಸುಳ್ಯದಿಂದ ಕುರುಂಜಿ ಕುಟುಂಬದವರು ಹಾಗೂ ದೇವಸ್ಥಾನದ ಭಕ್ತರು ತೆರಳಿ ಅಲ್ಲಿ ಪೂಜೆ ನಡೆಯುವುದು. ಡಿ.24ರಂದು ಬೆಳಗ್ಗೆ ಕುಂಭಾಶಿಯಿಂದ ಬ್ರಹ್ಮರಥ ಹೊರಡಲಿದ್ದು ಡಿ.25ರಂದು ಸುಳ್ಯದತ್ತ ಬ್ರಹ್ಮರಥ ಆಗಮಿಸುತ್ತದೆ. ಮಧ್ಯಾಹ್ನ ವೇಳೆಗೆ ಜಾಲ್ಸೂರಿಗೆ ತಲುಪುತ್ತದೆ. ಅಲ್ಲಿ ರಥದ ಸ್ವಾಗತ ಆದ ಬಳಿಕ ವಾಹನ ಮೆರವಣಿಗೆಯೊಂದಿಗೆ ಬ್ರಹ್ಮರಥ ಸುಳ್ಯಕ್ಕೆ ಬರಲಿದೆ. ಸುಳ್ಯದ ಜ್ಯೋತಿ ವೃತ್ತದ ಬಳಿಯಿಂದ ಮೆರವಣಿಗೆಯಲ್ಲಿ ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ರಥ ಬರಲಿದೆ.
ಡಿ.31ರಂದು ಕುರುಂಜಿ ಕುಟುಂಬದವರು ರಥವನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡುವರು. 2025ರ ಜನವರಿ 1 ರಂದು ರಥದ ಆಲಯದಲ್ಲಿ ವಾಸ್ತುಪೂಜೆ ನಡೆಯಲಿದ್ದು, ಜ.2ರಂದು ಸುಳ್ಯದಲ್ಲಿ ರಥದ ಭೂಸ್ಪರ್ಶ ನಡೆಯಲಿದೆ ಎಂದು ಕೆ.ವಿ.ಜಿ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಮಾಹಿತಿ ನೀಡಿದರು.
ಸಮಿತಿ ರಚನೆ :
ಬ್ರಹ್ಮರಥ ಸಮರ್ಪಣೆಯ ಸಿದ್ಧತೆಗಾಗಿ ಸಮಿತಿಯನ್ನು ಮಾಡಲಾಗಿದ್ದು ಸಮಿತಿಯ ಗೌರವಾಧ್ಯಕ್ಷರಾಗಿ ಹಿರಿಯ ಉದ್ಯಮಿ ಕೃಷ್ಣ ಕಾಮತ್ ಹಾಗೂ ಅಧ್ಯಕ್ಷರಾಗಿ ನಾರಾಯಣ ಕೇಕಡ್ಕರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಡಾ.ಲೀಲಾಧರ್ ಡಿ.ವಿ, ಉಪಾಧ್ಯಕ್ಷರಾಗಿ ಕೆ.ವಿ.ಹೇಮನಾಥ ಕುರುಂಜಿಯವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಮಾತನಾಡಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥದ ಆಗಮನವಾಗಲಿದೆ.ಡಿ.23ರಂದು ರಥಕ್ಕೆ ಪೂಜೆ ನಡೆದು 24 ರಂದು ಪುತ್ತೂರಿಗೆ ತಲುಪುತ್ತದೆ.
ಡಿ.31 ರಂದು ದೇವರಿಗೆ ಸಮರ್ಪಣೆ ನಡೆಯಲಿದೆ.
ಜ.2ರಂದು ಭೂಸ್ಪರ್ಶವಾಗಲಿದೆ ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಮಾತನಾಡಿದರು.
ವೇದಿಕೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ,ಎನ್.ಜಯಪ್ರಕಾಶ್ ರೈ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯೆ ಕಿಶೋರಿ ಶೇಟ್, ಎಸ್.ಐ.ಸಂತೋಷ್, ಮಧೂರು ದೇವಸ್ಥಾನದ ಮುರಳೀಧರ್ ಉಪಸ್ಥಿತರಿದ್ದರು.ಕೃಪಾಶಂಕರ ತುದಿಯಡ್ಕ ಸ್ವಾಗತಿಸಿ, ಹರ್ಷ ಕರುಣಾಕರ ಪ್ರಾರ್ಥಿಸಿ, ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.