ಸುಳ್ಯ:ಮುಖ್ಯಮಂತ್ರಿಯವರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ 25 ಕೋಟಿ ವಿಶೇಷ ಅನುದಾನದ ಕಾಮಗಾರಿಗಳು ಪಾರದರ್ಶಕವಾಗಿರಬೇಕು. ಈ ಅನುದಾನದಿಂದ ನಡೆಸುವ ಕಾಮಗಾರಿಗಳ ಪಟ್ಟಿಯನ್ನು ಶಾಸಕರು ಸಾರ್ವಜನಿಕವಾಗಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರದ 25 ಕೋಟಿ ಅನುದಾನದಲ್ಲಿ
ಯಾವ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಿದೆ ಎಂಬ ಬಗ್ಗೆ ಸಾರ್ವಜನಿಕರು ಕೇಳುತ್ತಿದ್ದಾರೆ. ಈ ಅನುದಾನದ ಕೆಲವು ಕಾಮಗಾರಿಗಳ ಗುದ್ದಲಿ ಪೂಜೆ ನಡೆಸಿರುವ ಬಗ್ಗೆ ಮಾಹಿತಿ ಇದೆ. ಆದರೆ ಯಾವ ಕಾಮಗಾರಿಗೆ ಅನುದಾನ ಇರಿಸಿದೆ ಎಂಬ ಮಾಹಿತಿ ಯಾರಿಗೂ ಇಲ್ಲ. ಆದುದರಿಂದ ಕಾಮಗಾರಿಗಳ ವಿವರದ ಪಟ್ಟಿಯನ್ನು ಶಾಸಕರು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರಿಗೆ ಅತೀ ಅಗತ್ಯ ಇರುವ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಬೇಕು ಎಂದು ಅವರು ಆಗ್ರಹಿಸಿದರು. ಸುಳ್ಯ ನಗರ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ವ್ಯವಸ್ಥೆಗಳ ಕೊರತೆ ಇದೆ. ನಗರದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ಹೆಸರಿನಲ್ಲಿ ರಸ್ತೆಯ ಕಾಂಕ್ರೀಟ್ ಹಾಗೂ ಇಂಟರ್ಲಾಕ್ಗಳನ್ನು ಅಗೆದು ಹಾಕಿದ್ದು ಅದನ್ನು ಇನ್ನೂ ಸರಿಪಡಿಸಿಲ್ಲ.ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಸುಳ್ಯದ

ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಮತ್ತು 110 ಕೆವಿ ಸಬ್ ಸ್ಟೇಷನ್ ಪೂರ್ತಿ ಮಾಡಲು ಆದ್ಯತೆ ನೀಡಲಾಗುವುದು. ಮೆಸ್ಕಾಂ ಎಂಡಿಯನ್ನು ಕರೆಸಿ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.
ವಾರದಲ್ಲಿ ನೂತನ ಬ್ಲಾಕ್ ಸಮಿತಿ:
ಒಂದು ವಾರದಲ್ಲಿ ನೂತನ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ ಅವರು ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ಬ್ಲಾಕ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸುವ ಯೋಚನೆ ಇದೆ.ಗ್ರಾಮ ಮಟ್ಟದಲ್ಲಿ ಮತ್ತು ಬೂತ್ ಮಟ್ಟದಲ್ಲಿ ಸಭೆ ನಡೆಸಿ ಪಕ್ಷ ಸಂಘಟನೆಯನ್ನು ನಿರಂತರ ನಡೆಸಲಾಗುವುದು ಎಂದರು.
ಸುಳ್ಯದಲ್ಲಿ ಇಲಾಖೆಗಳು ನಿಷ್ಕ್ರೀಯವಾಗಿದೆ ಎಂದ ಅವರು ಯಾವುದೇ ಅಧಿಕಾರಿಗಳಿಂದ ಅಥವಾ ಇಲಾಖೆಗಳಿಂದ ಜನರಿಗೆ ತೊಂದರೆ ಆದರೆ ಸಹಿಸುವುದಿಲ್ಲ ಎಂದರು.ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಗುವುದು ಮತ್ತು ಹೊಸ ಕಾಮಗಾರಿಗಳನ್ನು ಉದ್ಘಾಟಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ ಕಲ್ಮಡ್ಕ, ಮುಖಂಡರಾದ ಎಸ್.ಸಂಶುದ್ದೀನ್, ಮಹೇಶ್ ಬೆಳ್ಳಾರ್ಕರ್, ಶಿವಕುಮಾರ್ ಕಂದಡ್ಕ, ಮಂಜುನಾಥ ಮಡ್ತಿಲ, ರಕ್ಷಿತ್ ದೊಡ್ಡಡ್ಕ, ಮಂಜುನಾಥ್ ಕಂದಡ್ಕ ಉಪಸ್ಥಿತರಿದ್ದರು.










