ಸುಳ್ಯ: ಏ.4ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭ ಸುಳ್ಯ ವಿಧಾನಸಭಾ ಕ್ಷೇತ್ರದಿಂದ 3 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಸ್ವಂತ ವಾಹನಗಳಲ್ಲಿ ತೆರಳಲಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಈ ಬಾರಿ
ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಬಿಜೆಪಿ ವತಿಯಿಂದ ಸುಳ್ಯ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಲಾಗುತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರಿಗೆ 45 ಸಾವಿರ ಮತಗಳ ಅಂತರ ನೀಡಲಾಗಿದೆ. ಈ ಬಾರಿ ಸುಳ್ಯ ಕ್ಷೇತ್ರದಿಂದ 60 ಸಾವಿರ ಮತಗಳ ಅಂತರ ಪಡೆಯುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯ ಹಿನ್ನಲೆಯಲ್ಲಿ ಎ.8ರಂದು ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಕಡಬ ತಾಲೂಕಿನ ಆಲಂಕಾರಿನಲ್ಲಿ ಬಿಜೆಪಿ ಮಹಿಳಾ ಸಮಾವೇಶ ಆಯೋಜನೆಗೊಂಡಿದೆ ಎಂದು ಹೇಳಿದರು.
ಮೋದಿ ಮತ್ತೆ ಪ್ರಧಾನಿ:
ನಳಿನ್ ಕುಮಾರ್ ಕಟೀಲ್ರವರು ತಮ್ಮ ಅವಧಿಯಲ್ಲಿ ಕೇಂದ್ರದಿಂದ ದೊಡ್ಡ ಮೊತ್ತದ ಅನುದಾನ ತಂದು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಮಾಡಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದೆ. ಮಾಣಿ – ಮೈಸೂರು ಚತುಷ್ಪಥ ರಸ್ತೆಗೆ ಯೋಜನೆ ರೂಪಿಸಲಾಗಿದೆ. ಬಳ್ಪವನ್ನು ಆದರ್ಶ ಗ್ರಾಮವನ್ನಾಗಿ ಮಾಡಿ ಅಭಿವೃದ್ಧಿ ಮಾಡಲಾಗಿದೆ.ಸುಳ್ಯ ಕ್ಷೇತ್ರದ 76 ಗ್ರಾಮದಲ್ಲಿಯೂ ಅನುದಾನ ಬಳಕೆ ಮಾಡಲಾಗಿದೆ. ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದರೊಂದಿಗೆ, ಸಮಾಜದ ಎಲ್ಲ ವರ್ಗಗಳಿಗೂ ಉಪಯೋಗವಾಗುವ ಯೋಜನೆ ತಂದಿದ್ದಾರೆ. ಆದ್ದರಿಂದ ಮತ್ತೊಮ್ಮೆ ಅವರು ಪ್ರಧಾನಿಯಾಗಿ ಬರಬೇಕೆಂದು ಎಲ್ಲರು ಆಶಿಸುತ್ತಾರೆ ಎಂದು ಅವರು ಹೇಳಿದರು.
ಬೃಹತ್ ಮಹಿಳಾ ಸಮಾವೇಶ:
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ,ಎ.8ರಂದು ಆಲಂಕಾರಿನಲ್ಲಿ ಬಿಜೆಪಿ ಮಹಿಳಾ ಸಮಾವೇಶ ನಡೆಯಲಿದೆ. ಏ.8ರಂದು ಪೂ.10ರಿಂದ ನಡೆಯುವ ಸಮಾವೇಶದ ಯಶಸ್ವಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮಾವೇಶವನ್ನು ಯಶಸ್ವಿ ಗೊಳಿಸಲು ಎಲ್ಲ ಮಹಿಳೆಯವರು ಭಾಗವಹಿಸಬೇಕು ಎಂದು ಅವರು ಹೇಳಿದರು.
ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಂದಿದೆ: ಕಂಜಿಪಿಲಿ
ಸುಳ್ಯ ತಾಲೂಕಿನ ಬಹುತೇಕ ಗ್ರಾಮಗಳ ರಸ್ತೆಗಳು ಅಭಿವೃದ್ಧಿ ಕಂಡಿದೆ. ಸಿಆರ್ಎಫ್, ಪಿಎಂಜಿಎಸ್ವೈ ಯೋಜನೆಯಿಂದ ಕೋಟ್ಯಂತರ ರೂಗಳು ಬಂದಿದೆ ಎಂದು ಚುನಾವಣಾ ನಿರ್ವಹಣಾ ತಂಡದ ಸಂಚಾಲಕ ಹರೀಶ್ ಕಂಜಿಪಿಲಿ ಹೇಳಿದ್ದಾರೆ.ಅಡಿಕೆ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಬೇಡಿಕೆ ಇದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಸಂಸದರ ಮೂಲಕ ಇದರ ಶಾಶ್ವತ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಸುಳ್ಯ ಪ್ರಭಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ,ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಹೇಶ್ ಜೋಗಿ, ಬಿಜೆಪಿ ಬಿಜೆಪಿ ನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ನಿರ್ದೇಶಕ ಹೇಮಂತ್ ಕಂದಡ್ಕ, ನ.ಪಂ. ಸದಸ್ಯೆ ಶಶಿಕಲಾ ನೀರಬಿದಿರೆ, ಸಾಮಾಜಿಕ ಜಾಲತಾಣದ ಜಿಲ್ಲಾ ಸಮಿತಿ ಸದಸ್ಯ ಪ್ರಸಾದ್ ಕಾಟೂರು ಇದ್ದರು.