ಸುಳ್ಯ: ಸುಳ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲಿ ಇಂದು ನಡೆದ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ನೇತೃತ್ವದ ಜಿಲ್ಲಾ ಪ್ರಮುಖರ
ಮತ್ತು ಸುಳ್ಯ ಕೋರ್ ಕಮಿಟಿ ಸದಸ್ಯರ ಮಧ್ಯೆ ನಡೆದ ಸಭೆಯಲ್ಲಿ ಯಾವುದೇ ನಿರ್ಧಾರ ಮೂಡಿ ಬರಲಿಲ್ಲ.ಈ ಹಿನ್ನಲೆಯಲ್ಲಿ ನಾಯಕರು ಸಭೆಯ ಯಾವುದೇ ನಿರ್ಧಾರವನ್ನೂ ಪ್ರಕಟಿಸಿಲ್ಲ ಎಂದು ಹೇಳಲಾಗಿದೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಕೋರ್ ಕಮಿಟಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ವಿಚಾರದ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೆ ತರಬೇಕು, ಸುಳ್ಯದಲ್ಲಿ
ಕಾರ್ಯಕರ್ತರ ಸಭೆ ನಡೆಸಬೇಕು. ಸಭೆಗೆ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರು ಭಾಗವಹಿಸಿ ಅಭಿಪ್ರಾಯ ಕ್ರೂಡೀಕರಿಸಬೇಕು ಇತ್ಯಾದಿ ಅಭಿಪ್ರಾಯಗಳನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಬಗ್ಗೆ ಕೋರ್ ಕಮಿಟಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದಲ್ಲಿ ಪ್ರಜಾಪ್ರಭುತ್ವ ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಕೋರ್ ಕಮಿಟಿ, ಮಂಡಲ ಸಮಿತಿ ಹಾಗೂ ಕಾರ್ಯಕರ್ತರ ತೀರ್ಮಾನಕ್ಕೆ ಬೆಲೆ ನೀಡಬೇಕು ಎಂದು ಕೋರ್ ಸಮಿತಿ ಸದಸ್ಯರು ಜಿಲ್ಲಾ ಪ್ರಮುಖರಿಗೆ ತಿಳಿಸಿದ್ದಾರೆ. ಕೋರ್ ಕಮಿಟಿ ಸದಸ್ಯರು ಹಾಗೂ ಜಿಲ್ಲಾ ಮುಖಂಡರು ಮಧ್ಯೆ ತೀವ್ರ ಚರ್ಚೆ ನಡೆಯಿತು. ಕೋರ್ ಕಮಿಟಿ ಸದಸ್ಯರು ತಮ್ಮ ನಿಲುವಿನಲ್ಲಿ ಪಟ್ಟು ಬಿಡದೆ ಚರ್ಚೆ ನಡೆಸಿದರು. ಜಿಲ್ಲಾ ಸಮಿತಿ ಮುಖಂಡರು ಸುಳ್ಯದ ಮುಖಂಡರ ಅಹವಾಲನ್ನು ಆಲಿಸಿ ಸಮಾಧಾನಪಡಿಸಿದ್ದಾರೆ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಗಾಗಿ ದುಡಿಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯ ಬಳಿಕ ಮಾತನಾಡಿ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ. ನಮ್ಮಲ್ಲಿ ಯಾವುದೇ ಅಸಮಾಧಾನ, ಗೊಂದಲ ಇಲ್ಲಾ, ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ,
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಕೋರ್ ಕಮಿಟಿ ಸದಸ್ಯರಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಕೃಷ್ಣ ಶೆಟ್ಟಿ ಕಡಬ ಭಾಗವಹಿಸಿದ್ದರು.
ವೆಂಕಟ್ ವಳಲಂಬೆಯವರನ್ನು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾಗಿ ನೇಮಕಗೊಳಿಸಿದ ಹಿನ್ನಲೆಯಲ್ಲಿ ಸುಳ್ಯ ಬಿಜೆಪಿಯಲ್ಲಿ ಅಸಮಾಧಾನ ಉಲ್ಬಣಗೊಂಡು ನಾಯಕರು ಸಭೆ ನಡೆಸಿ ಅಸಹಕಾರ ಘೋಷಣೆ ಮಾಡಿದ್ದರು. ಕಾರ್ಯಕರ್ತರು ಕಚೇರಿಗೆ ಬೀಗ ಜಡಿದಿದ್ದರು. ನಿನ್ನೆ ನಡೆದ ಬಿಜೆಪಿ ಜಿಲ್ಲಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಆಗಿ. ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರು ಬಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾತುಕತೆ ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪ್ರಮುಖರು ಸುಳ್ಯಕ್ಕೆ ಆಗಮಿಸಿ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದಾರೆ.







