ನವದೆಹಲಿ: ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 29 ರೂ.ಗಳ ಸಬ್ಸಿಡಿ ದರದಲ್ಲಿ ಭಾರತ್ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 5 ಕೆಜಿ ಮತ್ತು 10 ಕೆಜಿ ಪ್ಯಾಕ್ಗಳಲ್ಲಿ ಲಭ್ಯವಿರುವ ಸಬ್ಸಿಡಿ ಅಕ್ಕಿಯನ್ನು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಬಿಡುಗಡೆ ಮಾಡಿದರು. ಜನರಿಗೆ ದೈನಂದಿನ ಆಹಾರ ಪದಾರ್ಥಗಳು ಕೈಗೆಟುಕುವ ದರದಲ್ಲಿ ಲಭ್ಯ ವಾಗುವಂತೆ ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದರು. ಕೈಗೆಟುಕುವ ದರದಲ್ಲಿ ದೈನಂದಿನ ಅಗತ್ಯಗಳನ್ನು ಒದಗಿಸಲು ಸರ್ಕಾರ
ಸಕ್ರಿಯವಾಗಿದೆ ಎಂದು ವಿವರಿಸಿದರು.ಭಾರತ್ ರೈಸ್ ಮಾರಾಟ ಮಾಡುವ 100 ಮೊಬೈಲ್ ವ್ಯಾನ್ಗಳಿಗೆ ಚಾಲನೆ ನೀಡಿ, ಐವರು ಫಲಾನುಭವಿಗಳಿಗೆ 5 ಕೆಜಿ ಪ್ಯಾಕ್ಗಳನ್ನು ಸಚಿವರು ವಿತರಿಸಿದರು.
ಭಾರತ್ ಬ್ರ್ಯಾಂಡ್ ಹೆಸರಿನಲ್ಲಿ ಗೋಧಿ ಹಿಟ್ಟು, ಬೇಳೆಕಾಳುಗಳು, ಈರುಳ್ಳಿ ಮತ್ತು ಟೊಮ್ಯಾಟೊಗಳನ್ನು ಈಗಾಗಲೇ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಭಾರತ್ ರೈಸ್ಗೂ ಅದೇ ಮಟ್ಟದ ಬೆಂಬಲ ಸಿಗಲಿದೆ. ಗ್ರಾಹಕರ ಪ್ರತಿಕ್ರಿಯೆ ನೋಡಿ ಮಾರಾಟವನ್ನು ಹೆಚ್ಚಿಸಲಾಗುತ್ತದೆ ಎಂದು ಸಚಿವಪಿಯೂಷ್ ಗೋಯಲ್ ಹೇಳಿದರು.
ರಾಜ್ಯದಲ್ಲಿಯೂ ಅಕ್ಕಿ ಮಾರಾಟ ಆರಂಭವಾಗಿದ್ದು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳದಿಂದ (ನಾಫೆಡ್) ಸಂಚಾರಿ ವಾಹನಗಳ ಮೂಲಕ ‘ಭಾರತ್ ಬ್ರ್ಯಾಂಡ್’ ಅಕ್ಕಿ ಮಾರಾಟಕ್ಕೆ ಬೆಂಗಳೂರಿನಲ್ಲಿ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಪ್ರತಿ ಕೆ.ಜಿಗೆ 29 ದರ ನಿಗದಿಪಡಿಸಲಾಗಿದ್ದು, 5 ಕೆ.ಜಿ ಮತ್ತು 10 ಕೆ.ಜಿ ಪ್ಯಾಕೆಟ್ಗಳಲ್ಲಿ ದೊರೆಯಲಿದೆ. ಇನ್ನೊಂದು ವಾರದೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಸೇವೆ ವಿಸ್ತರಣೆಯಾಗಲಿದೆ.
ಜಿಲ್ಲೆಗಳಲ್ಲಿ ಸ್ಥಳೀಯ ಚಿಲ್ಲರೆ ಮಾರಾಟಗಾರರ ಮೂಲಕವೂ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟಕ್ಕೆ ನಿರ್ಧರಿಸಲಾಗಿದೆ’ ಎಂದು ನಾಫೆಡ್ನ ಅಧಿಕಾರಿಗಳು ತಿಳಿಸಿದ್ದಾರೆ.







