ಬೆಂಗಳೂರು: ಅಕ್ರಮ-ಸಕ್ರಮ ನಿಯಮಗಳು ಜಾರಿಗೆ ಬಂದಲ್ಲಿ ನಗರ ವ್ಯಾಪ್ತಿಯಲ್ಲಿಯೂ ಅನಧಿಕೃತ ಅಭಿವೃದ್ಧಿಗಳ ಸಕ್ರಮಗೊಳಿಸುವ ಬಗ್ಗೆ ಪರಿಶೀಲನೆ ನಡೆಸಬಹುದಾಗಿದೆ. ಈ ಕುರಿತು ಸಾಧಕ- ಭಾದಕಗಳನ್ನು ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು
ರಚಿಸಲಾಹಿದೆ ಎಂದು ವಿಧಾನಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಪ್ರಶ್ನೆಗೆ ಪೌರಾಡಳಿತ ಸಚಿವರಾದ ರಹೀಂ ಖಾನ್ ಉತ್ತರಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು
ನಗರಸಭೆ ವ್ಯಾಪ್ತಿಯಲ್ಲಿ ವಾಸ್ತವ್ಯ/ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆಯಾದ ನಿವೇಶನಕ್ಕೆ ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ ಹಲವಾರು ಭಾಗಗಳನ್ನಾಗಿ ವಿಭಜಿಸಿ ಕೈ ಬರಹದ ಖಾತೆ ಮೂಲಕ ಮಾರಾಟ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
ನಿವೇಶನದ ಒಂದು ಭಾಗವನ್ನು ಖರೀದಿ ಮಾಡಿದ ವ್ಯಕ್ತಿ ಸದರಿ ನಿವೇಶನಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಮತ್ತು ಸ್ಥಳೀಯ ಸಂಸ್ಥೆಯಿಂದ ಇ-ಖಾತೆ ಮತ್ತು ಕಟ್ಟಡ ಪರವಾನಿಗೆ ಪಡೆಯಲು ಸಾಧ್ಯವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
ಸದರಿ ನಿವೇಶನವನ್ನು ಮಾರಾಟ ಮಾಡಲು ಸಾಧ್ಯವಾಗದೇ ಸಮಸ್ಯೆ ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಈ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾವನೆ ಸರ್ಕಾರದ ಗಮನಕ್ಕೆ ಬಂದಿದೆಯೇ ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಯಾವುದು ಎಂದು ಶಾಸಕರು ಲಿಖಿತವಾಗಿ ಪ್ರಶ್ನಿಸಿದ್ದರು.
ಇದಕ್ಕೆ ಉತ್ತರ ನೀಡಿದ ಸಚಿವರು ಇದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಸ್ಥಳೀಯ ಯೋಜನಾ ಪ್ರದೇಶ ಘೋಷಣೆಯಾಗದೇ ಇರುವ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಆ ತೆರೆದಿರುವ ಖಾತೆಗಳನ್ನು ಹಾಗೂ ಸ್ಥಳೀಯ ಯೋಜನಾ ಪ್ರದೇಶ ಘೋಷಣೆಯಾಗದೇ ಇರುವ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆಗೊಂಡ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ನಿರ್ದೇಶನಗಳು ಪರಿವರ್ತನೆಗೊಂಡ ದಿನಾಂಕದಿಂದ ಅನ್ವಯವಾಗುವುದರಿಂದ ಇದಕ್ಕೆ ಪೂರ್ವದಲ್ಲಿ (ದಿನಾಂಕ:
22-03-2017ರ ಪೂರ್ವದಲ್ಲಿ) ಗ್ರಾಮ ಪಂಚಾಯಿತಿಗಳ
ವತಿಯಿಂದ ಇ-ಸ್ವತ್ತು ತಂತ್ರಾಂಶದಡಿ ತೆರೆಯಲಾದ ಖಾತೆಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ದಾಖಲಿಸುವ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ.
ಸ್ಥಳಿಯ ಯೋಜನಾ ಪ್ರದೇಶ ಘೋಷಣೆಯಾದ ಪ್ರದೇಶಗಳಲ್ಲಿ ಬಂದಿರುವ ಅನಧಿಕೃತ ಬೆಳವಣಿಗೆಗಳನ್ನು ಸಕ್ರಮಗೊಳಿಸುವ ಸಂಬಂಧ ಅಧಿಸೂಚನೆ ಜಾರಿಗೆ ತಂದಿರುತ್ತದೆ. ನಿಯಮಗಳಿಗೆ ಘನ ಸರ್ವೋಚ್ಚ ನ್ಯಾಯಾಲಯವು ದಿನಾಂಕ: 13-01-2017ರ ಆದೇಶದಲ್ಲಿ ದಿನಾಂಕ: 28-05-2014 ರಂದು ಸರ್ಕಾರ ಹೊರಡಿಸಿರುವ ಅಕ್ರಮ-ಸಕ್ರಮ ನಿಯಮಗಳಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ಪರಿಶೀಲಿಸದಂತೆ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ: 19-03- 2015ರಂದು ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ತೀರ್ಪಿನವರೆಗೂ ಮುಂದುವರೆಸುವಂತೆ ಆದೇಶ ನೀಡಿರುತ್ತದೆ. ಆದುದರಿಂದ ಅಕ್ರಮ-ಸಕ್ರಮ ನಿಯಮಗಳು ಜಾರಿಗೆ ಬಂದಲ್ಲಿ ಅನಧಿಕೃತ ಅಭಿವೃದ್ಧಿಗಳನ್ನು ಸಕ್ರಮಗೊಳಿಸುವ ಬಗ್ಗೆ ಪರಿಶೀಲಿಸಬಹುದಾಗಿದೆ.
ಅನಧಿಕೃತ ಸ್ವತ್ತುಗಳನ್ನು ಸಹ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ ರಾಜ್ಯದ ಇತರೆ ಮಹಾನಗರ ಪಾಲಿಕೆಗಳು / ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಮತ್ತು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರಲ್ಲಿ ಅಳವಡಿಸಿಕೊಳ್ಳುವ ಕುರಿತು ಸಾಧಕ- ಭಾದಕಗಳನ್ನು ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ ಎಂದು ಉತ್ತರ ನೀಡಲಾಗಿದೆ.









