ಸುಳ್ಯ:ಬೇಂಗಮಲೆ- ಅಯ್ಯನಕಟ್ಟೆ ಲೋಕೋಪಯೋಗಿ ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಅಮರ ಮುಡ್ನೂರು ಗ್ರಾಮದ ಪ್ರಮುಖರು ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಕ್ಕುಜಡ್ಕ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ತಿರುಮಲೇಶ್ವರ ಕುಡುಂಬಿಲ ಹಾಗೂ ಅಮರ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು
ಸುಳ್ಯ ತಾಲೂಕು ಕೇಂದ್ರವನ್ನು ಸಂಪರ್ಕಿಸಲು
ಕಲ್ಮಡ್ಕ, ಪಂಜ, ಕಡಬ ಭಾಗದಿಂದ ಇರುವ ಪ್ರಮುಖ ರಸ್ತೆಯಾದ ಬೇಂಗಮಲೆ ಅಯ್ಯನಕಟ್ಟೆ ಲೋಕೋಪಯೋಗಿ ರಸ್ತೆಯು ಇತ್ತೀಚಿನ ದಿನಗಳಲ್ಲಿ ಬಹಳ ಹಾಳಾಗಿದ್ದು, ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿರುವ ಕಾರಣ ಆದಷ್ಟು ಬೇಗ ದುರಸ್ತಿ ಮಾಡಬೇಕು. ಬೆಳ್ಳಾರೆ ಭಾಗದಿಂದ ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆ. ಬಹುಗ್ರಾಮ ಕುಡಿಯುವ ನೀರಿನ ಪೈಪ್ಲೈನ್, ಜಲಜೀವನ್ ಮಿಷನ್ ಪೈಪ್ಲೈನ್ ಹೀಗೆ ಹಲವು ಯೋಜನೆಗಳಿಂದ ರಸ್ತೆ ಬದಿ ಮಣ್ಣು ಅಗೆದ ಕಾರಣ ರಸ್ತೆ ಬಹಳ ಹಾಳಾಗಿರುತ್ತದೆ. ಈ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳ ಬಸ್ಸು, ಸಾರ್ವಜನಿಕ ಸಾರಿಗೆ ಸಂಪರ್ಕದ ವಾಹನಗಳು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಸದರಿ ರಸ್ತೆಯ ಅಕ್ಕೊಜಿಪಾಲ್ನಿಂದ
ಸುಳುಗೋಡು ತನಕ ಸುಮಾರು ಐದು ಕಿಲೋಮಿಟರ್ ರಸ್ತೆಯನ್ನು ತುರ್ತಾಗಿ ಅಗಗಲೀಕರಣಗೊಳಿಸಿ ದುರಸ್ತಿ ಮಾಡಬೇಕೆಂದು ಒತ್ತಾಯಿಸಿದರು. ವಿದ್ಯುತ್ ಕೇಬಲ್ ಅಳವಡಿಕೆಯು ಸಮರ್ಪಕವಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈ ಬಗ್ಗೆ ತುರ್ತಾಗಿ ಸ್ಪಂದಿಸದಿದ್ದಲ್ಲಿ ಊರಿನ ಸಾರ್ವಜನಿಕರನ್ನು ಸೇರಿಸಿ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಕೊರತ್ಯಡ್ಕ, ಹೂವಪ್ಪ ಗೌಡ ಆರ್ನೋಜಿ, ಗರುಡ ಯುವಕ ಮಂಡಲದ ಮಾಜಿ ಅಧ್ಯಕ್ಷ ಮನೋಜ್ ಪಡ್ಪು ಉಪಸ್ಥಿತರಿದ್ದರು.












