ಬೆಳ್ಳಾರೆ:ಯುವ ಜನಾಂಗವನ್ನು ಸುಸ್ಥಿರವಾಗಿ ಬೆಳೆಸಲು ಕಳೆದ 10 ವರ್ಷಗಳಿಂದ ಕೇಂದ್ರ ಸರಕಾರ ಸಾಕಷ್ಟು ಪ್ರಯತ್ನ ನಡೆಸುತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತರಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಂದಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ವಸಂತ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಮ್ಮ ಯುವ ಜನಸಂಖ್ಯೆ ನಮ್ಮ
ದೊಡ್ಡ ಆಸ್ತಿ, ನಮ್ಮ ಪರಂಪರೆ, ಸಂಸ್ಕೃತಿಯ ಔನ್ನತ್ಯದಿಂದ ಜಗತ್ತಿನ ನಾಯಕತ್ವ ಪಡೆಯುವ ಎಲ್ಲಾ ಅವಕಾಶ ಭಾರತಕ್ಜಿದೆ ಎಂದರು.ಬೆಳ್ಳಾರೆ ಕೆಪಿಎಸ್ ಸರಕಾರಿ ಶಾಲೆ ರಾಜ್ಯಕ್ಕೆ ಮಾದರಿಯಾಗಿ ಬೆಳೆದಿದೆ ಮತ್ತು ಸುಂದರ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತಾನಾಡಿ ‘ಗ್ರಾಮೀಣ ವಿದ್ಯೆಯ ಮತ್ತು ಆರೋಗ್ಯದ ಮೂಲಕ ಗ್ರಾಮೀಣ ಭಾಗದಲ್ಲಿ ಮೌನ ಕ್ರಾಂತಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಎಂಬ ಕೀಳರಿಮೆ ಮತ್ತು ಉಳಿದ ಮಾಧ್ಯಮಗಳು ಶ್ರೇಷ್ಠ ಎಂಬ ಭ್ರಮ ಬೇಡ ಎಂದು ಹೇಳಿದರು. ಕನ್ನಡ ಶಾಲೆಯೇ ಸರ್ವ ಶ್ರೇಷ್ಠ, ಕನ್ನಡ ಶಾಲೆಯ ಶಿಕ್ಷಣದಲ್ಲಿ ಕಲಿತರೆ ಯಾವುದಕ್ಕೂ ಕಡಿಮೆ ಇಲ್ಲ. ಉತ್ತಮ ಕನ್ನಡ ಶಾಲೆ ನಡೆಸಿದರೆ ಕಲಿಯುವವರು ಇದ್ದಾರೆ. ತಮ್ಮ ವಿದ್ಯಾಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣಕ್ಕಾಗಿ 15 ಸಾವಿರಕ್ಕೂ ಹೆಚ್ಚು ಮಂದಿ ಪ್ರವೇಶ ಪರೀಕ್ಷೆ ಬರೆಯುವುದು ಅದಕ್ಕೆ ಉದಾಹರಣೆ ಎಂದರು.
ಭಾಷೆಗೂ ಬುದ್ಧಿಮತ್ತೆಗೂ ಸಂಬಂಧ ಇಲ್ಲ.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಹಳ ಮುಖ್ಯ. ಅದು ನಮ್ಮ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ. ಇದನ್ನು ಕನ್ನಡದಲ್ಲಿ ಕಲಿತವರು ಉನ್ನತ ಸ್ಥಾನಕ್ಕೆ ಏರಿದ್ದಾರೆ ಎಂದರು. ಮಾನವ ಸಂಪತ್ತು ಇರುವ ದೇಶ ನಮ್ಮದು. ನಮ್ಮ ಮಾನವ ಸಂಪತ್ತನ್ನು ಪ್ರಬುದ್ಧರಾಗಿ ಬೆಳೆಯಲು ವಿದ್ಯೆ ಮತ್ತು ಆರೋಗ್ಯ ಮುಖ್ಯ. ಎಲ್ಲರಿಗೂ ಶಿಕ್ಷಣ ಕೊಟ್ಟರೆ ಸಮಾಜದಲ್ಲಿನ ಕಂದಕವನ್ನು ದೂರ ಮಾಡಬಹುದು ಎಂದರು. ಹಿಂದೆಲ್ಲಾ ವಿದ್ಯೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಾರಿಗಳು ಇರಲಿಲ್ಲ. ಈಗ ವಿದ್ಯೆ ಮತ್ತು ಆರೋಗ್ಯ ಕ್ಷೇತ್ರಕ್ಕೂ ವ್ಯಾಪಾರಿಗಳು ಲಗ್ಗೆ ಹಾಕಿವೆ ಇದು ಅಪಾಯಕಾರಿ. ಆದುದರಿಂದ ನಾವು ಜಾಗೃತರಾಗಬೇಕು.ಸರಕಾರ ಕೂಡ ಇದರ ಬಗ್ಗೆ ಅರ್ಥೈಸಬೇಕು.
ಸರಿಯಾಗಿ ಶಿಕ್ಷಕರನ್ನೂ ಕೊಡದೆ ಕನ್ನಡ ಮಾಧ್ಯಮ ಶಿಕ್ಷಣವನ್ನು ಸೊರಗುವಂತೆ ಮಾಡಿದರೆ ಕನ್ನಡ ಶಾಲೆಗಳು ಸೋಲುತ್ತವೆ.
ಕನ್ನಡ ಶಾಲೆ ಸೋತರೆ ಅದು ಜನ ಸಾಮಾನ್ಯನ ಸೋಲು,
ಎಲ್ಲಾ ಫಲಿತಾಂಶದಲ್ಲಿ ಏಕಸೂತ್ರ ಅಳವಡಿಕೆ ಮಾಡಬೇಕು, ಪಠ್ಯ ಮಾತ್ರವಲ್ಲದೆ, ಪಠ್ಯೇತರವಾಗಿ ಮಕ್ಕಳನ್ನು ಬೆಳೆಸಬೇಕು, ಮಕ್ಕಳ ಹೃದಯಕ್ಕೆ ಶಿಕ್ಷಣ ನೀಡಬೇಕು ಎಂದು ಹೇಳಿದರು. ವಸಂತ ಸಂಭ್ರಮದಲ್ಲಿ ಎಲ್ಲರೂ ಒಟ್ಟು ಸೇರಿ ಸರಕಾರಿ ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಠಿಸಿರುವುದು ಶ್ಲಾಘನೀಯ ಎಂದರು.ಡಾ.ಎಂ.ಮೋಹನ್ ಆಳ್ವ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಅದ್ದೂರಿ ಕಾರ್ಯಕ್ರಮಕ್ಕೆ ದುಡಿದ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದರು.
ಶಾಸಕಿ ಭಾಗೀರಥಿ ಮುರುಳ್ಯ,ಮಾಜಿ ಸಚಿವ ಎಸ್.ಅಂಗಾರ,
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಕೆ.ಕುಶಲ, ಬೆಳ್ಳಾರೆ ಗ್ರಾ.ಪಂ.ಸದಸ್ಯರಾದ ಅನಿಲ್ ರೈ ಪುಡ್ಕಜೆ, ದಿನೇಶ್ಚಂದ್ರ ಬಿ ಹೆಗ್ಡೆ, ಗೌರಿ, ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ ಅತಿಥಿಗಳಾಗಿದ್ದರು.ವಿಶ್ರಾಂತ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ವಸಂತ ಸಂಭ್ರಮ ಅವಲೋಕನದ ಮಾತುಗಳನ್ನಾಡಿದರು.
ವಸಂತ ಸಂಭ್ರಮ ಸಮಿತಿಯ ಅಧ್ಯಕ್ಷೆ ರಾಜೀವಿ ಆರ್ ರೈ, ಸಂಚಾಲಕರಾದ ಎಸ್.ಎನ್.ಮನ್ಮಥ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ,
ಪ್ರಾಂಶುಪಾಲರಾದ ಜನಾರ್ದನ ಕೆ. ಎನ್. ಉಪಪ್ರಾಂಶುಪಾಲರಾದ ಉಮಾಕುಮಾರಿ, ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ. ಎಸ್ಡಿಎಂಸಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.