ಬೆಳ್ಳಾರೆ: ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡು ಖೇಲೋ ಇಂಡಿಯಾ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಕರ್ನಾಟಕ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ಬೆಳ್ಳಾರೆ ಕೆಪಿಎಸ್ ನ 10 ನೇ ತರಗತಿ ವಿದ್ಯಾರ್ಥಿಗಳಾದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ , ಹಾಗು ತಂಡದ ವ್ಯವಸ್ಥಾಪಕಿಯಾಗಿದ್ದು ಖೇಲೋ ಇಂಡಿಯಾ ಕ್ರೀಡಾಧಿಕಾರಿಯಾಗಿ ಆಯ್ಕೆಯಾದ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಅವರನ್ನು
ಬೆಳ್ಳಾರೆ ಕೆಪಿಎಸ್ ನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.
ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ ಕ್ರೀಡಾಪಟುಗಳನ್ನು ಪಂಜದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಪ್ರಮುಖರು ಸೇರಿ ಸ್ವಾಗತಿಸಿದರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಇವರನ್ನು ಬೆಳ್ಳಾರೆಗೆ ಕರೆ ತರಲಾಯಿತು. ಶಾಲಾ ಮೈದಾನದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಇವರನ್ನು ಶಾಲು ಹೊದಿಸಿ,ಹೂಗುಚ್ಛ ನೀಡಿ ಅಭಿನಂದಿಸಲಾಯಿತು.
ಶಾಲಾ ಶಿಕ್ಷಕರು,ವಿದ್ಯಾರ್ಥಿಗಳ ಪೋಷಕರು,ಹಾಗೂ ಊರವರು ಅಭಿನಂದಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್.ಜನಾರ್ಧನ, ಉಪ ಪ್ರಾಂಶುಪಾಲೆ ಉಮಾಕುಮಾರಿ, ಹಿ.ಪ್ರಾ.ಶಾಲಾ ಮುಖ್ಯಗುರು ಮಾಯಿಲಪ್ಪ,ಎಸ್.ಡಿ.ಎಂ.ಸಿ.ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ,ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಪನ್ನೆ, ಮಣಿಕಂಠ,ದಿನೇಶ್ಚಂದ್ರ ಹೆಗ್ಡೆ, ಭವ್ಯ ರವಿಕುಮಾರ್,ಪ್ರದೀಪ್ ಕುಮಾರ್ ರೈ ಪನ್ನೆ, ಹರ್ಷ ಜೆ.ಜೋಗಿಬೆಟ್ಟು, ಪ್ರೀತಂ ರೈ ,ಮುರಳಿ ತಡಗಜೆ ,ಜಯರಾಮ ಉಮಿಕ್ಕಳ,ಓವಿನ್ ಪಿಂಟೊ,ವೀರನಾಥ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.
ಉಪಪ್ರಾಂಶುಪಾಲರಾದ ಉಮಾಕುಮಾರಿ ಸ್ವಾಗತಿಸಿ,ವಂದಿಸಿದರು. ಶಿಕ್ಷಕ ರಾಮಚಂದ್ರ ಭಟ್ ಮತ್ತು ಶಿಕ್ಷಕ ವೃಂದದವರು ಸಹಕರಿಸಿದರು. ವಾಹನ ಮೆರವಣಿಗೆ ಬರುತ್ತಿದ್ದಾಗ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು.










