*ಗಂಗಾಧರ ಕಲ್ಲಪಳ್ಳಿ.
ಕಾಸರಗೋಡು:ನೋಡದವರು ಒಮ್ಮೆಯಾದರೂ ನೋಡಲೇ ಬೇಕಾದ, ನೋಡಿದವರು ಮತ್ತೆ ಮತ್ತೆ ನೋಡಬೇಕು ಮತ್ತೆ ಮತ್ತೆ ಹೋಗಬೇಕು ಎಂದು ಅನ್ನಿಸುವ ಕಡಲ ತಡಿಯ ಅದ್ಭುತ ಬೇಕಲ ಕೋಟೆ. ದೈನಂದಿನ ಕೆಲಸದ ಒತ್ತಡ, ಆಯಾಸದಿಂದ ಬೋರ್ ಆದರೆ ಎದ್ದು ಹೋಗಿ ರಿಲಾಕ್ಸ್ ಆಗಿ ಬರಬಹುದಾದ ಒತ್ತಡ, ಆಯಾಸ ಮರೆಸಿ ಕಣ್ಣಿಗೂ, ಮನಸ್ಸಿಗೂ ನವೋಲ್ಲಾಸ ತುಂಬುವ ವಿಸ್ಮಯ ಈ ಬೇಕಲ ಕೋಟೆ.
ಒಂದು ದಿನದ ಪ್ರವಾಸಕ್ಕಾಗಿ ನೀಲ ಕಡಲಿಗೆ ವಿಶಾಲವಾಗಿ

ತೆರೆದುಕೊಂಡಿರುವ ಬೇಕಲ ಕೋಟೆಗೆ ಭೇಟಿ ನೀಡಬಹುದು. ಹಿರಿಯರು, ಕಿರಿಯರು ಯುವಕರು ಎಂಬ ಭೇದವಿಲ್ಲದೆ ಎಲ್ಲರನ್ನೂ ಆಕರ್ಷಿಸುವ ಪ್ರವಾಸಿ ತಾಣ ಬೇಕಲ ಕೋಟೆ. ಶತಮಾನಗಳ ಹಿಂದೆ ನಿರ್ಮಿಸಿದ ಇತಿಹಾಸದ ಹೆಗ್ಗುರುತಾಗಿ ತಲೆ ಎತ್ತಿ ನಿಂತಿರುವ ಕೋಟೆ, ವಿಶಾಲವಾದ ನೀಲಿ ಕಡಲು, ಅಲ್ಲಲ್ಲಿ ಸಾಗುವ ದೋಣಿ, ಸೂರ್ಯ ಅಸ್ತಮಿಸುವ ರಮಣೀಯ ದೃಶ್ಯಗಳು..ಹೀಗೆ ಬೇಕಲ ಒಂದು ಅದ್ಭುತ ಲೋಕವನ್ನು ತೆರೆದಿಡುತ್ತದೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪಳ್ಳಿಕರ ಪಂಚಾಯತ್ನಲ್ಲಿರುವ ಬೇಕಲ ಕೋಟೆ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗೂ ಹತ್ತಿರದ ಟೂರಿಸ್ಟ್ ಸ್ಪಾಟ್.ಇಲ್ಲಿ ಬೀಚ್ ಕ್ಯಾಂಪ್ ರೆಸಾರ್ಟ್, ಅತ್ಯಾಧುನಿಕ ಕಾಟೇಜ್, ಹೋಟೆಲ್ಗಳ ಸೌಲಭ್ಯವೂ ಇದೆ. ಪ್ರಕೃತಿ ರಮಣೀಯ, ಐತಿಹಾಸಿಕ ಸ್ಮರಣೀಯ ಬೇಕಲ ಕೋಟೆ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಲ್ಲೊಂದು.ಇಲ್ಲಿ ಸಿನಿಮಾ ಮತ್ತು ಧಾರವಾಹಿಯ ಅನೇಕ ಚಿತ್ರೀಕರಣಗಳು ನಡೆದಿವೆ. ಶತಮಾನಗಳಷ್ಟು ಹಳೆಯದಾದ ಈ ಅತ್ಯಂತ ಸುಂದರ ಕೋಟೆಯನ್ನು ನೋಡುವಾಗ ಸಿಗುವ ಆನಂದವೇ ಅನನ್ಯ.

ಬೇಕಲ ಕೋಟೆಯ ವಿಹಂಗಮ ನೋಟದ ಜೊತೆಗೆ ಕೋಟೆಯಲ್ಲಿ ನಿಂತು ನೀಲಿಗೆಂಪು ಕಡಲಂಚಿನಲ್ಲಿ ಸೂರ್ಯಾಸ್ತ ವೀಕ್ಷಣೆಯ ಸೊಬಗನ್ನು ಸವಿಯುವುದೇ ಅದ್ಭುತ ಅನುಭವ. ಕೋಟೆಯ ಪಕ್ಕದಲ್ಲೇ ಇರುವ ಬೀಚ್ ಪಾರ್ಕ್ನಲ್ಲಿ ಮಕ್ಕಳಿಗಾಗಿ ಚಿಲ್ಡ್ರನ್ಸ್ ಪಾರ್ಕ್, ಒಂಟೆ ಸವಾರಿ, ರೆಸ್ಟೋರೆಂಟ್, ಐಸ್ ಕ್ರೀಮ್ ಪಾರ್ಲರ್ ಎಲ್ಲವೂ ಇದೆ. ಬೇಕಲ ಕೋಟೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಕೇರಳ ರಾಜ್ಯದ ಅತಿ ದೊಡ್ಡದಾದ ಕೋಟೆ ಎಂದು ಹೆಸರುವಾಸಿಯಾಗಿದೆ.
ಸುಮಾರು 350 ವರ್ಷಗಳಷ್ಟು ಹಳೆಯ ರಕ್ಷಣಾತ್ಮಕ ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಕೋಟೆ ಇದಾಗಿದೆ. ಬೇಕಲ ಕೋಟೆಯು ಕಾಸರಗೋಡಿನ ಅತ್ಯುತ್ತಮವಾದ ಪ್ರವಾಸಿ ಕೇಂದ್ರವಾಗಿ ಜನಪ್ರಿಯವಾಗಿದೆ. ಸುಂದರವಾದ ಕಡಲತೀರದ ಬಳಿ ಇರುವ ಈ ಕೋಟೆಯ ನೋಟವು ಎಂಥವರನ್ನು ಮಂತ್ರಮುಗ್ಧಗೊಳಿಸುತ್ತದೆ.

ಕೋಟೆಯು ಸುಮಾರು 40 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ವೀಕ್ಷಣಾ ಗೋಪುರ, ಪಿರಂಗಿಗಳು ಮತ್ತು ರಕ್ಷಣೆಗಾಗಿ ಕಿಂಡಿಗಳನ್ನು ಹೊಂದಿದೆ.ಈ ಭದ್ರವಾದ ಕೋಟೆಯನ್ನು ರಕ್ಷಣೆಗಾಗಿ ನಿರ್ಮಿಸಲಾಗಿದೆ ಎನ್ನಲಾಗಿದೆ.1650ರಲ್ಲಿ ಕೆಳದಿ ಶಿವಪ್ಪ ನಾಯಕರಿಂದ ನಿರ್ಮಿಸಲ್ಪಟ್ಟ ಈ ಕೋಟೆಯು ಅರೇಬಿಯನ್ ಸಮುದ್ರದ ತೀರದಲ್ಲಿದ್ದು ವಿಶಿಷ್ಟ ವಿನ್ಯಾಸವನ್ನು ಹೊಂದಿದೆ.
ಕೆಲವು ವರ್ಷಗಳ ನಂತರ ಹೈದರಾಲಿ ವಶಕ್ಕೆ ಪಡೆದನು, ಕ್ರಮೇಣ ಟಿಪ್ಪು ಈ ಕೋಟೆಯನ್ನು ಮುಖ್ಯ ಸೇನಾ ಕೇಂದ್ರವನ್ನಾಗಿ ಮಾಡಿಕೊಂಡನು 1799 ರಲ್ಲಿ ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಟಿಪ್ಪು ಮರಣದ ನಂತರ ಈಸ್ಟ್ ಇಂಡಿಯಾ ಕಂಪನಿ ಈ ಕೋಟೆಯನ್ನು ವಶಪಡಿಸಿಕೊಂಡಿತು ಎಂದು ಇತಿಹಾಸ ಹೇಳುತ್ತದೆ.

ಹಲವು ಸಿನಿಮಾಗಳ ಲೊಕೇಷನ್ ಆಗಿಯೂ ಪ್ರಸಿದ್ಧಿ ಪಡೆದಿದೆ. ಪ್ರಸಿದ್ಧ ತಮಿಳು ಚಲನಚಿತ್ರ ‘ಬಾಂಬೆ’ಯ ‘ಉಯಿರೆ’ ಹಾಡನ್ನು ಇಲ್ಲಿ ಚಿತ್ರೀಕರಿಸಲಾಗಿತ್ತು, ಇದು ಪ್ರವಾಸಿಗರಲ್ಲಿ ಈ ಕೋಟೆಯನ್ನು ಜನಪ್ರಿಯಗೊಳಿಸಿತು.
ಕಾಸರಗೋಡು ನಗರದಿಂದ ಸುಮಾರು 16 ಕಿ.ಮೀ. ಸುಳ್ಯದಿಂದ ಜಾಲ್ಸೂರು ರಸ್ತೆಯಲ್ಲಿ ತೆರಳಿ, ಚೆರ್ಕಳದಿಂದ ಮತ್ತು ಕಾಸರಗೋಡಿನಿಂದ ತೆರಳಬಹುದು. ಸುಳ್ಯ-ಕೋಲ್ಚಾರ್- ಬಂದಡ್ಕ ರಸ್ತೆಯಲ್ಲಿ ಕುಂಡಂಕುಯಿ ಎಂಬಲ್ಲಿಂದ ಮೂನಾಂಕಡವ್ ಸೇತುವೆ ಮೂಲಕ ಪೆರಿಯ ತಲುಪಿ ಅಲ್ಲಿಂದ ಪಳ್ಳಿಕರೆಗೆ ತೆರಳಿ ಬೇಕಲ ಕೋಟೆ ಹಾಗೂ ಬೇಕಲ್ ಬೀಚ್ಗೆ ತೆರಳಬಹುದು.









