ಸುಳ್ಯ: ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಅಳವಡಿಸಿದ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಗೆ ಶುಭಕೋರಿದ ಬ್ಯಾನರ್ ಹರಿದ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆಯ ಬಗ್ಗೆ ಪೊಲೀಸರು ಈ ಕೆಳಗಿನಂತೆ ಮಾಹಿತಿ ನೀಡಿದ್ದಾರೆ.
”ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ, ಸುಳ್ಯ ಆಟೋ ರಿಕ್ಷಾ ಸಂಘದ ವತಿಯಿಂದ ಅಳವಡಿಸಿದ್ದ ಬ್ಯಾನರ್ನ ಮದ್ಯಭಾಗವನ್ನು, ಯಾರೋ ಹರಿದು ತೆಗೆದುಕೊಂಡು ಹೋಗಿರುವ ಬಗ್ಗೆ, ದಿನಾಂಕ: 06.01.2024ರಂದು ಆಟೊ ರಿಕ್ಷಾ ಸಂಘದ ಅಧ್ಯಕ್ಷರು ಸುಳ್ಯ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕೃತ್ಯವೆಸಗಿದವರ
ಪತ್ತೆಗಾಗಿ, ಸುಳ್ಯದಲ್ಲಿರುವ ಸುಮಾರು 40 ಸಿಸಿ ಕ್ಯಾಮಾರಗಳ ಪೂಟೇಜ್ಗಳನ್ನು ಪರಿಶೀಲನೆ ಮಾಡಿದಾಗ,ದಿನಾಂಕ:05.01.2024ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿರುವ ಅಪರಿಚಿತ ವಯಸ್ಸಾದ ವ್ಯಕ್ತಿಯೋರ್ವ, ಸದರಿ ಬ್ಯಾನರ್ ಹರಿದು ತನ್ನ ಕೈಯಲ್ಲಿ ಹಿಡಿದುಕೊಂಡು, ಸುಳ್ಯ ಪೇಟೆಯಲ್ಲಿ ಸುತ್ತಾಡಿರುವುದು ತಿಳಿದುಬಂದಿರುತ್ತದೆ ಹಾಗೂ ಬಳಿಕ ಸುಳ್ಯದ ವಿವೇಕನಂದ ಸರ್ಕಲ್ ಬಳಿ ಹರಿದ ಬ್ಯಾನರ್ ತುಂಡನ್ನು ಇಟ್ಟು ರಾಮನ ಜಪ ಮಾಡಿದ್ದನ್ನು ಸಾರ್ವಜನಿಕರ ನೋಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಹರಿದ ಬ್ಯಾನರ್ ತುಂಡನ್ನು ಪರಿಶೀಲಿಸಲಾಗಿ ಅಯೋಧ್ಯೆಯ ಪೋಟೋಗಾಗಲಿ ಹಾಗೂ ಶ್ರೀರಾಮನ ಪೋಟೋಗಾಗಲಿ ಯಾವುದೇ ರೀತಿಯ ಹಾನಿಯಾಗಿರುವುದು ಕಂಡುಬಂದಿರುವುದಿಲ್ಲ. ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.









