ಸುಳ್ಯ: ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮಯೂರಿ ಕಲಾಶಾಲೆಯ ವತಿಯಿಂದ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ಸಭಾಂಗಣದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರ ಬಣ್ಣದಲ್ಲಿ ಅಕ್ಷರಶಃ ದೇಸೀಯತೆ ಅನಾವರಣಗೊಂಡಿದೆ.
ವೈವಿಧ್ಯಮಯ ದೇಸೀಯ ಕಲೆಗಳ ಕಲಿಸುವಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಕಲಾ ರಸದೌತಣವನ್ನು ಉಣ ಬಡಿಸಿತು. ಈ ಬಾರಿಯೂ ಶಿಬಿರದಲ್ಲಿ ರಾಜ್ಯದ ವಿವಿಧ
ಕ್ಷೇತ್ರದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಗಮಿಸಿದ್ದರು. ಏಳರಿಂದ ಹದಿನೇಳು ವರ್ಷ ವಯೋಮಿತಿಯ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡು ನಕ್ಕು ನಲಿದರು. ಪ್ರಶಾಂತವಾದ ವಾತಾವರಣದಲ್ಲಿ ಪ್ರಕೃತಿಯೊಡನೆ ಬೆರೆತು ಹಾಡು,ನಗು ಖುಷಿಯೊಂದಿಗೆ ಸಹಬೋಜನದ ಕ್ಷಣಗಳೊಂದಿಗೆ ಸಾಗಿದ ಶಿಬಿರದಲ್ಲಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಪ್ರಕೃತಿಯನ್ನೇ ನಂಬಿ ಅದನ್ನೇ ಪೂಜಿಸುತ್ತಿದ್ದರು.ಆ ಜನಪದ ಬದುಕನ್ನು ಪರಿಚಯಿಸಲಾಯಿತು.
ಪರಿಸರದಲ್ಲಿ ಸಿಗುವ,ತೆಂಗಿನ ಗರಿ, ಗೆರಟೆ,ಬಿದಿರು,ಬೆತ್ತವನ್ನು ಉಪಯೋಗಿಸಿ ಗೃಹ ಬಳಕೆಗೆ,ಕೃಷಿಗೆ,ಮನರಂಜನೆಗೆ ಉಪಯೋಗಿಸುತ್ತಿದ್ದ ವಸ್ತುಗಳ ನಿರ್ಮಾಣದ ಕಲೆಯನ್ನು ಮಕ್ಕಳಿಗೆ ಕಲಿಸಲಾಯಿತು.
ಪರಿಸರ ಕಾಳಜಿ:
ನಿಸರ್ಗದ ತೆಂಗಿನ ಗರಿ, ಗೆರಟೆಗಳೇ ಇಲ್ಲಿ ವಸ್ತುಗಳಾದವು. ಗರಟೆಗಳನ್ನು ಚೆನ್ನಾಗಿ ಕೆತ್ತಿ ಅದಕ್ಕೆ ಬಣ್ಣ ಹಚ್ಚಿ ಸುಂದರವಾಗಿ ರೂಪಿಸಲಾಗಿದೆ. ಈ ಗೆರಟೆಯನ್ನು ಪ್ರತಿ ಮಕ್ಕಳಿಗೆ ನೀಡಲಾಗುವುದು. ಮನೆಯಲ್ಲಿ ಆ ಗೆರಟೆಯಲ್ಲಿ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸಬೇಕು. ಮಳೆಗಾಲದಲ್ಲಿ ಆ ಗೆರಟೆಯಲ್ಲಿ ಮಣ್ಣು ತುಂಬಿ ಅದರಲ್ಲಿ ಗಿಡದ ಬೀಜವನ್ನು ಮೊಳಕೆ ಬರಿಸಿ ಅದನ್ನು ನೆಡಬೇಕು. ಈ ರೀತಿ ಮಕ್ಕಳ ಮನಸ್ಸಿನಲ್ಲಿ ಪರಿಸರ ಕಾಳಜಿಯ ಸಂದೇಶ ಮತ್ತು ಒಂದು ಟಾಸ್ಕ್ ನೀಡಲಾಯಿತು.
ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಂದ ಹಿಂದಿನವರು ತಯಾರಿಸುತ್ತಿದ್ದ ಮೀನು ಹಿಡಿಯುವ ಕೂಂಜೋಳು, ತೆಂಗಿನ ಮರದ ಗರಿಯ ಗೊರಬೆ, ಬಿದಿರು, ಬೆತ್ತದ ಕುಕ್ಕೆ, ಅಡುಗೆ ಮನೆಯಲ್ಲಿ ಉಪಯೋಗಿಸುವ ಸೌಟು, ಪಾತ್ರಗಳ ನಿರ್ಮಾಣವನ್ನು ಕಲಿಸಿಕೊಡಲಾಯಿತು.
ಜೊತೆಗೆ ಮಕ್ಕಳಿಗೆ ಮ್ಯೂರಲ್ ಆರ್ಟ್, ವರ್ಲಿ ಚಿತ್ರ ಕಲೆಗಳನ್ನು ಅಭ್ಯಸಿಸಲಾಯಿತು. ತುಳು ನಾಡಿನ ಕಲೆ, ಸಾಂಸ್ಕೃತಿಕತೆಗಳ ಪರಿಚಯ ನೀಡಲಾಯಿತು.
ವಿದ್ಯಾರ್ಥಿಗಳಿಗೆ ಕರ್ಣ ಭಾರ ನಾಟಕ, ಒಗಟಿನ ರಾಣಿ ನಾಟಕ, ಸ್ವಾಮಿ ಅಯ್ಯಪ್ಪ ನೃತ್ಯ ರೂಪಕ, ದೇಸೀ ಸೊಗಡಿನ ತಿತ್ತೀರಿ ನೃತ್ಯ, ಜಾನಪದ ನೃತ್ಯಗಳು, ದೇಸೀ ಸಮರ ಕಲೆ ಕಳರಿಪಯಟ್ನ್ನು ಕಲಿಸಿಕೊಡಲಾಯಿತು.
ಶಿಬಿರದಲ್ಲಿ ಕಲಿತ ಕಲಾ ರೂಪಕಗಳು, ನಾಟಕ ಹಾಗೂ ನೃತ್ಯಗಳನ್ನು ಸಮಾರೊಪ ದಿನ ಶಿಬಿರದ ಮಕ್ಕಳು ರಂಗದ ಮೇಲೆ ಪ್ರದರ್ಶನ ಮಾಡಲಿದ್ದಾರೆ. ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ನಿರ್ದೇಶನದಲ್ಲಿ ರಾಜ್ಯದ ಖ್ಯಾತ ಸಂಲಪನ್ಮೂಲ ವ್ಯಕ್ತಿಗಳಾದ ಮೋಹನ್ ಶೇಣಿ, ವಿನೋದ್ ಕರ್ಕೇರ, ಶುಭಕರ್ ಪುತ್ತೂರು, ರಾಹುಲ್ ಎಸ್.ರಾವ್, ಹೇಮಂತ್ ಬೆಂಗಳೂರು, ಸತ್ಯಪ್ರಕಾಶ್ ಕೋಲ್ಚಾರ್, ರಂಗಮಯೂರಿ ಕಲಾ ಶಾಲೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು ಶಿಬಿರದ ಯಶಸ್ವಿಗೆ ಸಹಕರಿಸಿದ್ದಾರೆ.
ಒಟ್ಟಿನಲ್ಲಿ ಮಾಯವಾದ ಜನಪದ ಬದುಕನ್ನು ನೆನಪಿಸುವ, ಮರೆತು ಹೋದ ದೇಸೀ ಕಲೆಗಳನ್ನು ಮಕ್ಕಳಿಗೆ ಪರಿಚಯಿಸುವ ವೆದಿಕೆಯಾಗಿ ಬಣ್ಣ ಶಿಬಿರ ಮಾರ್ಪಾಡಾಯಿತು.ದೇಸೀ ಆಟಗಳು, ಜಾನಪದ ಹಾಡುಗಳು, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಕಲಿಸುವುದರ ಜೊತೆಗೆ ಮಕ್ಕಳಿಗೆ ರಂಗ ತರಬೇತಿ, ನಾಟಕ ರಚನೆ-ನಿರ್ಮಾಣ, ಜನಪದ ಹಾಡು, ನೃತ್ಯದ
ಜೊತೆಗೆ ದೇಶಭಕ್ತಿಯ ಗಾನ, ಸಂವಿಧಾನ ಪಠಣ
ವಿಶೇಷತೆಯಾಯಿತು. ಜೊತೆಗೆ ಬೆಂಕಿ ಅನಾಹುತದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ. ಭಜನೆ, ಪ್ರಾಣಾಯಾಮ ಸೇರಿದಂತೆ 9 ದಿನ ಕಾಯರ್ತೋಡಿಯಲ್ಲಿ ಅಕ್ಷರಷಃ ‘ಬಣ್ಣದ ಲೋಕ’ ತೆರೆದುಕೊಂಡಿತು. ಮಕ್ಕಳು ಆ ಮಾಯಾ ಲೋಕದಲ್ಲಿ ಕುಣಿದು ಕುಪ್ಪಳಿಸಿ..ನಲಿದು ಸಂಭ್ರಮಿಸಿದರು..!