ಬೆಂಗಳೂರು: ನವೆಂಬರ್ 25 ಮತ್ತು 26 ರಂದು ರಾಜ್ಯ ರಾಜಧಾನಿ ಕಂಬಳ ಉತ್ಸವ ಭರ್ಜರಿಯಿಂದ ನಡೆಯಲಿದೆ. ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಕರಾವಳಿಯ ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು, ಲಕ್ಷಾಂತರ ಮಂದಿ ಪ್ರೇಕ್ಷಕರು ಭಾಗವಹಿಸಲಿದ್ದಾರೆ.ಬಾರಿ ವಿಜೃಂಭಣೆಯಿಂದ ನಡೆಯಲಿರುವ
ಬೆಂಗಳೂರು ಕಂಬಳಕ್ಕೆ ಎಲ್ಲಾ ಸಿದ್ಧತೆಗಳು ಪೂರ್ತಿಯಾಗಿದೆ. 200 ಕೋಣಗಳು ಭಾಗಿಯಾಗಲಿವೆ ಎಂದು ಕಂಬಳ ಸಂಘಟಕರಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಂಘಟನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. ಬೆಂಗಳೂರು ಕಂಬಳದಲ್ಲಿ ವಿಜೇತರಾಗುವ ಕೋಣದ ಮಾಲೀಕರಿಗೆ 1 ಲಕ್ಷ ರೂ. ನಗದು, 16 ಗ್ರಾಂ ಸ್ವರ್ಣ ಕೊಡಲಾಗುತ್ತದೆ. ದ್ವಿತೀಯ ಸ್ಥಾನ ಗಳಿಸಿದವರಿಗೆ 50,000 ರೂ. ಜತೆಗೆ 2.8 ಗ್ರಾಂ ಚಿನ್ನ ಮತ್ತು ತೃತೀಯ ಸ್ಥಾನ ಪಡೆದವರಿಗೆ 25,000 ರೂ. ನಗದು ಹಾಗೂ 4 ಗ್ರಾಂ ಬಂಗಾರದ ಪದಕವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.







