ಸುಳ್ಯ:ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಬಂದೂಕು ಪರವಾನಗಿದಾರರು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಕೃಷಿಕರಿಗೆ ನೀಡುವ ಕೋವಿ ಪರವಾನಗಿ ನವೀಕರಣದಲ್ಲಿ ಆಗುತ್ತಿರುವ ವಿಳಂಬ ಮತ್ತು ನಿರಾಕರಣೆಯ ಬಗ್ಗೆ ಗಮನ ಸೆಳೆಯಲಾಯಿತು.ಕಾಡಂಚಿನ ಗ್ರಾಮಗಳಲ್ಲಿ
ಆನೆ, ಚಿರತೆ ಮತ್ತು ಇತರ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ರಕ್ಷಣೆಗಾಗಿ ರೈತರಿಗೆ ಆಯುಧಗಳ ಅಗತ್ಯವಿದೆ. ಅರ್ಹರಿಗೆ ಪರವಾನಗಿ ನಿರಾಕರಿಸಬಾರದು ಮತ್ತು ತಂದೆಯಿಂದ ಮಗನಿಗೆ ಪರವಾನಗಿ ವರ್ಗಾವಣೆ ಮಾಡುವಾಗಲೂ ತಾಂತ್ರಿಕ ಕಾರಣ ನೀಡಿ ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಶಾಸಕರು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಪರವಾನಗಿ ನೀಡಲು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗುತ್ತಿದೆ ಎಂದು ಪರವಾನಗಿದಾರರ ಒಕ್ಕೂಟದ ಸಂಚಾಲಕ ಜಯಪ್ರಸಾದ್ ಜೋಶಿ ಹೇಳಿದರು.
ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ ನೀಡಿ ಯಾವುದೇ ಕಾರಣವಿಲ್ಲದೆ ಅರ್ಜಿಗಳನ್ನು ನಿರಾಕರಿಸಿಲ್ಲ, ಪೊಲೀಸ್ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಬಾಕಿ ಇರುವ ಅರ್ಜಿಗಳನ್ನು ಗಮನಹರಿಸಿ, ಒಂದು ತಿಂಗಳೊಳಗೆ ಕಂದಾಯ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ವರದಿ ಪಡೆದು ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.







