ಧರ್ಮಸ್ಥಳ:ಧರ್ಮಸ್ಥಳ ಕ್ಷೇತ್ರದ ಮಹಿಮೆ ಅದ್ಭುತವಾಗಿದ್ದು ಮಾತಿನಿಂದ ವರ್ಣಿಸಲು ಸಾಧ್ಯವಿಲ್ಲ. ಇಲ್ಲಿಗೆ ಬಂದು ತಾನು ಅತೀವ ಸಂತಸಪಟ್ಟಿದ್ದೇನೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಇಳೆಯರಾಜ ಹೇಳಿದ್ದಾರೆ.ಧರ್ಮಸ್ಥಳದಲ್ಲಿ ಒಂದು ವಾರ ಕಾಲ ನಡೆದ ಭಜನಾ ತರಬೇತಿ ಕಮ್ಮಟದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸುಶ್ರಾವ್ಯವಾಗಿ ಹಾಡೊಂದನ್ನು
ಹಾಡಿ ಶ್ರೋತೃಗಳನ್ನು ರಂಜಿಸಿದ ಅವರು ತಾನು ಕೊಲ್ಲೂರಿನ ಪರಮಭಕ್ತನಾಗಿದ್ದು, ಅಲ್ಲಿ ಬಂದಾಗಲೂ ಹಾಡಿದ ಅದೇ ರಾಗದ ಅದೇ ಹಾಡನ್ನು ಇಲ್ಲಿಯೂ ಹಾಡಲು ಅಭಿಮಾನಪಡುತ್ತೇನೆ ಎಂದು ನುಡಿದರು.
ಆಶೀರ್ವಚನ ನೀಡಿದ ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಭಕ್ತಿಗೆ ಮೂಲವೇ ಭಜನೆ. ನಮ್ಮ ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಭಜನೆ ಹಾಸುಹೊಕ್ಕಾಗಿದ್ದು ಶ್ರದ್ಧಾ-ಭಕ್ತಿಯ ಭಜನೆ ಮೂಲಕ ದೇವರ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಜನಾ ತರಬೇತಿ ಪಡೆದವರು ನಾಯಕತ್ವ ಗುಣ ಬೆಳೆಸಿಕೊಂಡು ಆಯಾ ಊರಿನ ಪ್ರಗತಿಯ ರೂವಾರಿಗಳಾಗಬೇಕು. ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಪ್ರಜ್ಞಾವಂತ ನಾಗರಿಕರಾಗಿ, ಪ್ರಗತಿಶೀಲ ಚಿಂತನೆಯೊಂದಿಗೆ ಸಮಾಜದಲ್ಲಿ ಸುಖ-ಶಾಂತಿ, ಸಾಮರಸ್ಯ, ಸೌಹಾರ್ದತೆ ನೆಲೆಸುವಂತೆ ಮಾಡಬೇಕು ಎಂದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ,
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್,
ಪುಲಿಯಾರು ಸಿದ್ಧಪ್ಪ ಅಯ್ಯಪ್ಪ ಸ್ವಾಮೀಜಿ, ಮಾಣಿಲದ ಮೋಹನದಾಸ ಸ್ವಾಮೀಜಿ ಇದ್ದರು ಅತಿಥಿಗಳಾಗಿದ್ದರು.ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.
ಧರ್ಮಸ್ಥಳದ ವಿದುಷಿ ಕುಮಾರಿ ಚೈತ್ರಾ ಮತ್ತು ಬಳಗದವರ ನೃತ್ಯಭಜನೆ ಆಕರ್ಷಕವಾಗಿ ಮೂಡಿ ಬಂತು.
ಭಜನಾ ತರಬೇತಿ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಶ್ರೀನಿವಾಸರಾವ್ ಧರ್ಮಸ್ಥಳ ಧನ್ಯವಾದವಿತ್ತರು.