ಬೆಂಗಳೂರು:ಕರಾವಳಿ ಸಮಗ್ರ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭಾಗಹಿಸಿ ಸುಳ್ಯ ಕ್ಷೇತ್ರದ ಹಾಗೂ ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಸಭೆಯ ಗಮನ ಸೆಳೆದರು. ಸುಳ್ಯದ ವಿದ್ಯುತ್ ಸಮಸ್ಯೆ, ಅಡಿಕೆ ಹಳದಿ ರೋಗ, ಎಲೆಚುಕ್ಕಿ ರೋಗ, ಅರಂತೋಡು-ಪಟ್ಟಿ- ಭಾಗಮಂಡಲ ರಸ್ತೆ ಅಭಿವೃದ್ಧಿ ಸೇರಿ ವಿವಿಧ
ಸಮಸ್ಯೆಗಳ ಕುರಿತು ಅವರು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದರು.ಮಳೆ ಆರಂಭವಾಗುತ್ತಿದ್ದಂತೆ ವಿದ್ಯುತ್ ಸಮಸ್ಯೆ ಆರಂಭವಾಗಿದೆ.ವಿದ್ಯುತ್ತಿಗೆ ಸಂಬಂಧಿಸಿದಂತೆ ಸುಳ್ಯದಲ್ಲಿ ಬಹಳ ಸಮಸ್ಯೆಗಳು ಇದ್ದು ಅನಿಯಮಿತ ವಿದ್ಯುತ್ ಕಡಿತ, ಲೋ ವೋಲ್ಟೇಜ್ ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಅಡಿಕೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ರೈತರು ಕಂಗಾಲಾಗಿದ್ದಾರೆ.ಈ ಬಗ್ಗೆ ಸದ್ರಿ ರೋಗದ ಬಗ್ಗೆ ಸರಿಯಾದ ಸಂಶೋಧನೆ ನಡೆಸಿ ಸೂಕ್ತವಾದಂತ ಔಷಧಿಗಳನ್ನು ಉಚಿತವಾಗಿ ರೈತರಿಗೆ ನೀಡಬೇಕು. ಬೆಳೆ ಹಾನಿಯಾದ ಬಗ್ಗೆ ಸೂಕ್ತ ಪರಿಹಾರ ಕೊಡುವ ಬಗ್ಗೆ ಪ್ಯಾಕೇಜ್ ನೀಡಬೇಕು. ಪರ್ಯಾಯ ಬೆಳೆಗೆ ಒತ್ತು ನೀಡಬೇಕು ಎಂದರು.

ಬಗರ್ ಹುಕುಂ ಯೋಜನೆಯಲ್ಲಿ ಮಂಜೂರಾದ ಜಮೀನುಗಳ ಹಾಗೂ ಇತರ ಜಮೀನುಗಳ ಪ್ಲಾಟಿಂಗ್ ಬಾಕಿ ಇದೆ. ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಖಡತಗಳು ಬಾಕಿ ಇದ್ದು ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕು.
ಅರಣ್ಯ ಮತ್ತು ಕಂದಾಯ ಜಮೀನುಗಳ ಗಡಿ ಗುರುತಿಸುವಿಕೆ ಸಂಬಂಧಿಸಿದಂತೆ ಜಂಟಿ ಸರ್ವೆಗೆ ವಿಶೇಷ ಯೋಜನೆ ರೂಪಿಸಬೇಕು ಮತ್ತು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಈ ಜಂಟಿ ಸರ್ವೆಗಳು ಮತ್ತು ಗಡಿ ಗುರುತಿಸುವಿಕೆ ಬಹಳ ಅಗತ್ಯ ಇದೆ ಎಂದರು.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕಂದಾಯ ತಾಲೂಕುಗಳಿದ್ದು ಅತಿ ಹೆಚ್ಚು ಗ್ರಾಮೀಣ ಕಚ್ಚಾ ರಸ್ತೆಗಳು ಇರುವ ಕಾರಣ ಅದರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಸುಬ್ರಹ್ಮಣ್ಯ ಕೊಡಗು ಸಂಪರ್ಕಿಸುವ ಅತೀ ಅಗತ್ಯವಾದ ಸುಬ್ರಹ್ಮಣ್ಯ- ಅರಂತೋಡು-ತೊಡಿಕಾನ- ಪಟ್ಟಿ- ಭಾಗಮಂಡಲ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಅತಿಥಿ ಶಿಕ್ಷಕರ ಸಂಬಳ ಹೆಚ್ಚಿಸಬೇಕು, ಗ್ರಾಮೀಣ ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಕೊರತೆ ಇದ್ದು ಅದನ್ನು ಸರಿಪಡಿಸಬೇಕು. ಸಾಕಷ್ಟು ಸಿಬ್ಬಂದಿಗಳ ನೇಮಕ ಮಾಡಬೇಕು ಎಂದು ಒತ್ತಾಯಿಸಿದ ಶಾಸಕರು ಸುಳ್ಯ, ಸುಬ್ರಹ್ಮಣ್ಯ ಸೇರಿ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆಯೂ ಕರ್ತವ್ಯ ನಿರ್ವಹಿಸಲು ಡಾಕ್ಟರ್ಗಳನ್ನು ನೇಮಕ ಮಾಡಬೇಕು. ತಾಲೂಕು ಯುವಜನ ಮೇಳಗಳನ್ನು ಮತ್ತೆ ಆರಂಭಿಸಬೇಕು. ಸರಕಾರದಿಂದ ಕನಿಷ್ಠ ಒಂದು ಲಕ್ಷ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕರು ಪ್ರಸ್ತಾಪಿಸಿದ ಪ್ರತಿಯೊಂದು ವಿಷಯಗಳ ಬಗ್ಗೆ ‘ವೇರಿ ಗುಡ್’ ಎಂದು ಸ್ಪೀಕರ್ ಯು.ಟಿ.ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ತುಳುವಿನಲ್ಲಿ ಶಾಸಕರು ವಿಧಾನಸಭಾಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದರು.