ಸುಳ್ಯ:ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದ ಬಳಿಕ ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು ಚುನಾವಣೆ ನಡೆಯಲಿರುವ ಕ್ಷೇತ್ರಗಳತ್ತ ಪ್ರಚಾರದ ಗಮನ ಹರಿಸುತ್ತಾರೆ. ಅಥವಾ ಪಕ್ಷವೇ ಇತರ ಕಡೆಗಳಿಗೆ ಚುನಾವಣಾ ಪ್ರಚಾರ ಕಾರ್ಯಕಕ್ಕೆ ನಿಯೋಜನೆ ಮಾಡುತ್ತದೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದಿರುವ ಹಿನ್ನಲೆಯಲ್ಲಿ
ಇಲ್ಲಿನ ಪ್ರಮುಖರು ಇತರ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಅದರಂತೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ.ಮೇ.5ರ ತನಕ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳುವಂತೆ ಪಕ್ಷದ ಕಡೆಯಿಂದ ಸೂಚನೆ ಬಂದಿದೆ ಎಂದು ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಏ.28ರಂದು ಬೈಂದೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ವಿವಿಧ ಕಡೆ ಪ್ರಚಾರ ನಡೆಸಲಾಗಿದೆ. ಮೇ.5ರ ತನಕ ಬೈಂದೂರು ಕ್ಷೇತ್ರದಲ್ಲಿ ವಿವಿಧ ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದು ಶಾಸಕರು ತಿಳಿಸಿದ್ದಾರೆ. ಭೌಗೋಳಿಕವಾಗಿ ಉಡುಪಿ ಜಿಲ್ಲೆಗೆ ಒಳಪಟ್ಟಿದ್ದರೂ ಬೈಂದೂರು ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಇಲ್ಲಿ ಮೇ.7ರಂದು ಚುನಾವಣೆ ನಡೆಯಲಿದೆ.