ಕಿಂಗ್ಸ್ಟನ್: ಹಗಲು ರಾತ್ರಿ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಕೇವಲ 27 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾ ಪಂದ್ಯವನ್ನು 176 ರನ್ಗಳಿಂದ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ಪರ ವೇಗಿ ಮಿಚೆಲ್ ಸ್ಟಾರ್ಕ್ 6 ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ನ ಏಳು ಬ್ಯಾಟರ್ಗಳು ಶೂನ್ಯಕ್ಕೆ ಔಟಾದರು.ಮೊದಲ ಇನ್ನಿಂಗ್ಸ್ನಲ್ಲಿ
ಆಸ್ಟ್ರೇಲಿಯಾ 225 ರನ್ ದಾಖಲಿಸಿತ್ತು. ವಿಂಡೀಸ್ ಕೇವಲ 143 ರನ್ಗಳಿಗೆ ಸರ್ವಪತನವಾಗಿ 82 ರನ್ಗಳ ಹಿನ್ನಡೆ ಅನುಭವಿಸಿತ್ತು. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 121 ರನ್ಗಳಿಗೆ ಆಲೌಟ್ ಆಗುವ ಮೂಲಕ ವಿಂಡಿಸ್ಗೆ 203 ರನ್ಗಳ ಗೆಲುವಿನ ಗುರಿ ನೀಡಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ಕೇವಲ 14.3 ಓವರ್ಗಳಲ್ಲಿ ಆಲೌಟ್ ಆಯಿತು. ಕ್ಯಾಂಬೆಲ್, ಆ್ಯಂಡರ್ಸನ್, ಬ್ರೆಂಡನ್ ಕಿಂಗ್, ಚೇಸ್, ಶಮರ್ ಜೋಸೆಫ್, ಜೇಡನ್ ಸೀಲ್ಸ್, ವಾರಿಕನ್ ಶೂನ್ಯಕ್ಕೆ ಔಟಾದರು.ಮಿಚೆಲ್ ಸ್ಟಾರ್ಕ್ 7.3 ಓವರ್ಗಳಲ್ಲಿ 9 ರನ್ ನೀಡಿ 6 ವಿಕೆಟ್ ಕಬಳಿಸಿದರು. ಸ್ಕಾಟ್ ಬೋಲ್ಯಾಂಡ್ ಹ್ಯಾಟ್ರಿಕ್ ವಿಕೆಟ್ ಪಡೆದು ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದರು.ಈ ಹಿಂದೆ ಟೆಸ್ಟ್ನಲ್ಲಿ ಕಡಿಮೆ ಮೊತ್ತಕ್ಕೆ ನ್ಯೂಜಿಲೆಂಡ್ ಆಲೌಟ್ ಆಗಿತ್ತು. ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 26 ರನ್ಗಳಿಗೆ ಆಲೌಟ್ ಆಗಿತ್ತು.





