ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅಸ್ಟ್ರೇಲಿಯಾ 62 ರನ್ ಗಳ ಜಯ ಗಳಿಸಿದೆ. ಅಸ್ಟ್ರೇಲಿಯಾ ತಂಡ ನಿಗದಿತ 50 ಓವರ್ ಗಳಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಸ್ಪೋಟಕ ಶತಕದ ನೆರವಿನಿಂದ 367 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭಿಕರಾದ ಅಬ್ದುಲ್ಲಾ ಶಫೀಕ್, ಇಮಾಮ್ ಉಲ್ ಹಕ್ ಮೊದಲ ವಿಕೆಟ್ಗೆ 134 ರನ್ ಗಳ ಜೊತೆಯಾಟ ನೀಡಿ
ತಂಡಕ್ಕೆ ಒಳ್ಳೆಯ ಆರಂಭ ನೀಡಿದರು. ಅಬ್ದುಲ್ಲಾ ಶಫೀಕ್, 64 ರನ್ ಬಾರಿಸಿದರೆ, ಇಮಾಮ್ ಉಲ್ ಹಕ್ 70 ರನ್ ಬಾರಿಸಿಸರು.ನಾಯಕ ಬಾಬರ್ ಅಝಮ್ 18 ರನ್ ಸೌದ್ ಶಕೀಲ್ 30, ಮೊಹಮ್ಮದ್ ರಿಝ್ವಾನ್ 46 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ನಡೆಸಿದರು. ಆದರೆ ಪಾಕಿಸ್ತಾನ 305 ರನ್ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಆಡಂ ಝಾಂಪ 4 ವಿಕೆಟ್ ಪಡೆದರೆ, ಪ್ಯಾಟ್ ಕಮಿನ್ಸ್, ಮಾರ್ಕಸ್ ಸ್ಟೋನಿಸ್ ತಲಾ 2 ವಿಕೆಟ್ ಪಡೆದರು. ಮಿಷೆಲ್ ಸ್ಟಾರ್ಕ್, ಹೇಝಲ್ ವುಡ್ ಒಂದು ವಿಕೆಟ್ ಪಡೆದರು.
ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡು ಆಸೀಸ್ ಗೆ ಬ್ಯಾಟಿಂಗ್ ಆಹ್ವಾನ ನೀಡಿತು. ಬ್ಯಾಟಿಂಗ್ ಗೆ ಬಂದ ಆಸೀಸ್ ಆರಂಭಿಕರು ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. 259 ರನ್ ಗಳ ಬೃಹತ್ ಜೊತೆಯಾಟ ನಡೆಸಿದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಸ್ಪೋಟಕ ಶತಕ ಸಿಡಿಸಿದರು. ಆಸೀಸ್ ಪರ ಮಿಚೆಲ್ ಮಾರ್ಷ್ 108 ಎಸೆತಗಳಲ್ಲಿ 10 ಬೌಂಡರಿ 9 ಸಿಕ್ಸರ್ ಸಹಿತ 121 ಗಳಿಸಿದರು. ಡೇವಿಡ್ ವಾರ್ನರ್ 124 ಎಸೆತಗಳಲ್ಲಿ 14 ಬೌಂಡರಿ 9 ಸಿಕ್ಸರ್ ಸಹಿತ 163 ರನ್ ಬಾರಿಸಿದರು. ಬಳಿಕ ಬ್ಯಾಟಿಂಗ್ ಬಂದ ಬ್ಯಾಟರ್ ಗಳು ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು. ಪಾಕಿಸ್ತಾನ ಪರ ಶಾಹೀನ್ ಆಫ್ರಿದಿ 5 ವಿಕೆಟ್ ಸಾಧನೆ ಮಾಡಿದರು.ಹ್ಯಾರಿಸ್ ರವೂಫ್ 3 ವಿಕೆಟ್ ಪಡೆದರು.









