ಧರಂಶಾಲಾ: ಏಕದಿನ ವಿಶ್ವಕಪ್ ಕ್ರಿಕೆಟ್ನ ರೋಚಕ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯ ತಂಡ 5 ರನ್ಗಳ ಗೆಲುವು ದಾಖಲಿಸಿದೆ. ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಝಿಲ್ಯಾಂಡ್ ಕೊನೆ ಕ್ಷಣದ ವರೆಗೆ ನಡೆಸಿದ ಹೋರಾಟ ಹಾಗೂ ಕನ್ನಡಿಗ ರಚಿನ್ ರವೀಂದ್ರ ದಾಖಲಿಸಿದ ಸ್ಪೋಟಕ ಶತಕ ವ್ಯರ್ಥವಾಯಿತು.ಮೊದಲು ಬ್ಯಾಟ್ ಮಾಡಿದ
ಆಸ್ಟ್ರೇಲಿಯಾ.49.2 ಓವರ್ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 388 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನ್ಯೂಝಿಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿ ಗೆಲುವಿನ ಸನಿಹಕ್ಕೆ ಬಂದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ರವೀಂದ್ರ 89 ಎಸೆತಗಳನ್ನು ಎದುರಿಸಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 116 ರನ್ ಬಾರಿಸಿದರು. ಜೇಮ್ಸ್ ನಿಷಾಂ 39 ಎಸೆತಗಳಲ್ಲಿ 59, ಡ್ಯಾರೆಲ್ ಮಿಚ್ಚೆಲ್ 54 ರನ್ ಗಳಿಸಿದರು. ನಿಷಾಂ ಹಾಗೂ ರಚಿನ್ ರವೀಂದ್ರ ಹೋರಾಟ ಕಿವೀಸ್ಗೆ ಗೆಲುವಿನ ನಿರೀಕ್ಷೆ ಹುಟ್ಟಿಸಿತು. ಆದರೆ ಆಸ್ಟ್ರೇಲಿಯಾದ ಪ್ರಖರ ಬೌಲಿಂಗ್ ಹಾಗೂ ಫೀಲ್ಡಿಂಗ್ ಕಿವೀಸ್ ಗೆಲುವಿಗೆ ತಡೆ ಒಡ್ಡಿತು. ಆಸ್ಟ್ರೇಲಿಯಾ ಪರ ಆಡಂ ಝಂಪಾ 3, ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹಜಲ್ವುಡ್ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮುನ್ನ
ಟ್ರಾವಿಸ್ ಹೆಡ್ (109) ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿರು. ಡೇವಿಡ್ ವಾರ್ನರ್ (81) ಸ್ಫೋಟಕ ಅರ್ಧಶತಕ ಹಾಗೂ ಮಿಚೆಲ್ ಮಾರ್ಷ್ (36), ಗ್ಲೆನ್ ಮ್ಯಾಕ್ಸ್ ವೆಲ್ (41), ಜಾಶ್ ಇಂಗ್ಲಿಸ್ (38) ಹಾಗೂ ಪ್ಯಾಟ್ ಕಮಿನ್ಸ್ (37) ಉತ್ತಮ ಕೊಡುಗೆ ನೀಡಿದರು ನ್ಯೂಝಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್ 10 ಓವರ್ ಗಳಲ್ಲಿ 77 ರನ್ ನೀಡಿ 3 ವಿಕೆಟ್ ಗಳಿಸಿದರು. ಗ್ಲೆನ್ ಫಿಲಿಪ್ಸ್ 10 ಓವರ್ ಗಳಲ್ಲಿ ಕೇವಲ 37 ರನ್ ನೀಡಿ 3 ವಿಕೆಟ್ ಕಿತ್ತರು. ಮಿಚೆಲ್ ಸ್ಯಾಂಟ್ನರ್ 10 ಓವರ್ ಗಳಲ್ಲಿ 80 ರನ್ ನೀಡಿ ಎರಡು ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ ಹಾಗೂ ಜೇಮ್ಸ್ ನೀಶಮ್ ತಲಾ ಒಂದು ವಿಕೆಟ್ ಪಡೆದರು.