ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಎದುರು 33 ರನ್ ಅಂತರದ ಜಯ ದಾಖಲಿಸಿದೆ. ಆಸ್ಟ್ರೇಲಿಯಾ ಐದು ಪಂದ್ಯಗಳಲ್ಲಿ ಜಯ ಸಾಧಿಸಿದ್ದು 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು, ಸೆಮಿಫೈನಲ್ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಮುನ್ನುಗ್ಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್ ತಂಡ ಪಾಯಿಂಟ್
ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಉಳಿದಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ 286 ರನ್ ಗಳಿಸಿ ಆಲೌಟ್ ಆಯಿತು.
ಈ ಗುರಿ ಬೆನ್ನತ್ತಿದ ಆಂಗ್ಲರ ತಂಡ 48.1 ಓವರ್ಗಳಲ್ಲಿ 253 ರನ್ ಗಳಿಸಲಷ್ಟೇ ಶಕ್ತವಾಯಿತು. ಬೆನ್ ಸ್ಟೋಕ್ಸ್ 64 ರನ್, ಡೇವಿಡ್ ಮಲನ್ 50 ರನ್, ಮೊಯಿನ್ ಅಲಿ 42 ರನ್, ಹಾಗೂ ಕ್ರಿಸ್ ವೋಕ್ಸ್ 32 ರನ್ ಹೋರಾಟ ಹೊರತಾಗಿಯೂ ಇಂಗ್ಲೆಂಡ್ ಸೋಲನುಭವಿಸಿತು. ಆಸೀಸ್ ಪರ ಸ್ಪಿನ್ನರ್ ಆಡಮ್ ಝಾಂಪಾ(3-21)ಯಶಸ್ವಿ ಬೌಲರ್ ಎನಿಸಿಕೊಂಡರು. ಕಮಿನ್ಸ್(2-49) ಹಾಗೂ ಮಿಚೆಲ್ ಸ್ಟಾರ್ಕ್(2-66) ತಲಾ 2 ವಿಕೆಟ್ ಡಪೆದರು.ಮೊದಲು ಬ್ಯಾಟಿಂಗ್ ಆಹ್ವಾನಿಸಲ್ಪಟ್ಟ
ಆಸ್ಟ್ರೇಲಿಯ ಪರ ಮಾರ್ನಸ್ ಲಾಬುಶೇನ್ 71 ರನ್ ಸರ್ವಾಧಿಕ ಸ್ಕೋರ್ ಗಳಿಸಿದರು. ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜಾಸ್ ಬಟ್ಲರ್ ಪಡೆ ಕೇವಲ ಒಂದರಲ್ಲಿ ಗೆದ್ದು ಉಳಿದ ಆರು ಪಂದ್ಯಗಳಲ್ಲಿ ಮುಗ್ಗರಿಸಿದೆ. ಹೀಗಾಗಿ ಕೇವಲ 2 ಪಾಯಿಂಟ್ಗಳನ್ನು ಹೊಂದಿದ್ದು, ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.ಆಸ್ಟ್ರೇಲಿಯಾಕ್ಕೆ ಇನ್ನೂ ಎರಡು ಪಂದ್ಯಗಳನ್ನು ಆಡಲಿದ್ದು, ನಾಲ್ಕರ ಘಟ್ಟಕ್ಕೇರುವ ಅವಕಾಶವಿದೆ.





