ಸುಳ್ಯ: ಸುಳ್ಯದ ಬಹು ನಿರೀಕ್ಷಿತ 110 ಕೆ.ವಿ. ಸಬ್ ಸ್ಟೇಷನ್ ನಿರ್ಮಾಣಕ್ಕೆ ಕಾಮಗಾರಿ ಆದೇಶ (ವರ್ಕ್ ಆರ್ಡರ್) ಆಗಿದೆ. ಒಂದು ವರ್ಷದಲ್ಲಿ ಸುಳ್ಯದ 110 ಕೆ.ವಿ.ಸಬ್ ಸ್ಟೇಷನ್ ಕಾಮಗಾರಿ ಪೂರ್ತಿಯಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1964ರಲ್ಲಿ ಸುಳ್ಯಕ್ಕೆ 33 ಕೆವಿ ಸಬ್ ಸ್ಟೇಷನ್ ಅನುಷ್ಠಾನ ಆಗಿತ್ತು. ಬಳಿಕ 1994ರಲ್ಲಿ

ಕೆ.ಕುಶಲ ಎಂಎಲ್ಎ ಆಗಿರುವಾಗ 4.5 ಲಕ್ಷದಲ್ಲಿ 110 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ನೀಲಿ ನಕಾಶೆ ತಯಾರಿಸಲಾಗಿತ್ತು. ಬಳಿಕ 30 ವರ್ಷಗಳ ಕಾಲ 110 ಕೆವಿ ಸಬ್ ಸ್ಟೇಷನ್ ಅನುಷ್ಠಾನಕ್ಕೆ ಯಾವುದೇ ಪ್ರಯತ್ನಗಳು ನಡೆದಿಲ್ಲ 2022 ಜುಲೈನಲ್ಲಿ ಫಾರೆಸ್ಟ್ ಕ್ಲಿಯರೆನ್ಸ್ ಸಿಕ್ಕಿತ್ತು. 2023 ಮಾರ್ಚ್ನಲ್ಲಿ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಆದರೆ ಚುನಾವಣಾ ದೃಷ್ಟಿಯಿಂದ ಬಿಜೆಪಿಯವರು ಪ್ರಕ್ರಿಯೆಗಳು ಮುಗಿಯುವ ಮೊದಲೇ ಶಿಲಾನ್ಯಾಸ ನೆರವೇರಿಸಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಇಂಧನ ಸಚಿವರನ್ನು ಸುಳ್ಯದ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಕಾಮಗಾರಿ ಅನುಷ್ಠಾನ ಮಾಡುವಂತೆ ಮನವಿ ಮಾಡಿದ ಮೇರೆಗೆ ಇತರ ಪ್ರಕ್ರಿಯೆಗಳು ನಡೆದು ನ.9ರಂದು ಕಾಮಗಾರಿ ಆದೇಶ ಆಗಿದೆ. ಮುಂದಿನ ಒಂದು ವರ್ಷದಲ್ಲಿಕಾಮಗಾರಿ ಪೂರ್ತಿಯಾಗಲಿದೆ. 1994ರಲ್ಲಿ 4.5 ಲಕ್ಷದ ಕಾಮಗಾರಿಯ ಅನುಷ್ಠಾನಕ್ಕೆ ಯಾವುದೇ ಪ್ರಯತ್ನ ನಡೆಯದ ಕಾರಣ ಇದೀಗ ಮೊತ್ತ ಸಾವಿರ ಪಟ್ಟು ಜಾಸ್ತಿಯಾಗಿ 46 ಕೋಟಿ ಬೇಕಾಗಿ ಬಂದಿದೆ. ಕಾಂಗ್ರೆಸ್ ಶಾಸಕರು ತಯಾರಿಸಿದ ಯೋಜನೆಯನ್ನು 30 ವರ್ಷಗಳ ಬಳಿಕ ಕಾಂಗ್ರೆಸ್

ಸರಕಾರ ಅನುಷ್ಠಾನ ಮಾಡಲಿದೆ. 110 ಕಾಮಗಾರಿ ಅನುಷ್ಠಾನ ಆಗದ ಕಾರಣ ರೈತರು, ಜನರು ಕಳೆದ ಹಲವು ದಶಕಗಳಿಂದ ಬವಣೆ ಅನುಭವಿಸಬೇಕಾಗಿ ಬಂದಿದೆ ಎಂದು ಅವರು ಹೇಳಿದರು. ಅಡಿಕೆ ಹಳದಿ ರೋಗಕ್ಕೆ ಸಂಶೋಧನೆ ಮತ್ತು ಪರಿಹಾರಕ್ಕೆ 50 ಕೋಟಿ ನೀಡುವ ಬಗ್ಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಅದರ ಅನುಷ್ಠಾನಕ್ಕೆ ಪ್ರಯತ್ನ ನಡೆಸುತ್ತೇವೆ ಎಂದು ಅವರು ಹೇಳಿದರು.
ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ ಮಾತನಾಡಿ
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಸುಳ್ಯದ ಜನತೆಗೆ ನೀಡಿದ ಭರವಸೆಯಂತೆ ಆದ್ಯತೆಯ ಮೇರೆಗೆ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಸದಸ್ಯೆ ಸರಸ್ವತಿ ಕಾಮತ್, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಚಂದ್ರಲಿಂಗಂ ಉಪಸ್ಥಿತರಿದ್ದರು.









