ದುಬೈ: ಪಾಕಿಸ್ತಾನ ತಂಡವು ಗುರುವಾರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 11 ರನ್ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಲಿದೆ. ಗುಂಪು ಹಂತ, ಸೂಪರ್ ಫೋರ್ ಹಂತದ ಬಳಿಕ ಟೂರ್ನಿಯಲ್ಲಿ
ಮೂರನೇ ಬಾರಿ ಉಭಯ ತಂಡಗಳು ಸೆಣಸಾಡಲಿವೆ.ಪಾಕ್ ತಂಡ ನೀಡಿದ್ದ 136 ರನ್ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ತಂಡವು 9 ವಿಕೆಟ್ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ಶಮೀಮ್ ಹುಸೇನ್ (30;25ಎ) ಹೊರತು ಪಡಿಸಿ ಉಳಿದವರು ನಿರಾಸೆ ಮೂಡಿಸಿದರು. ಶಾಹಿನ್ ಅಫ್ರಿಧಿ,ಹ್ಯಾರಿಸ್ ರವೂಫ್ ಮೂರು ವಿಕೆಟ್ ಪಡೆದರೆ, ಸಯೀಮ್ ಅಯೂಬ್ ಎರಡು ವಿಕೆಟ್ ಗೆಲುವಿನಲ್ಲಿ ಪಾತ್ರ ವಹಿಸಿದ್ದರು.
ಇದಕ್ಕೂ ಮೊದಲು ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ದುಕೊಂಡಿತು. ಬೌಲರ್ಗಳು ಸಾಂಘಿಕ ನಿರ್ವಹಣೆ ತೋರಿ ಪಾಕ್ ತಂಡವನ್ನು 8 ವಿಕೆಟ್ಗೆ 135 ರನ್ಗಳಿಗೆ ನಿಯಂತ್ರಿಸಿದರು. ತಂಡ 50 ತಲುಪುವ ಮೊದಲೇ ಸಯೀಮ್ ಅಯೂಬ್ (0), ಫಖರ್ ಜಮಾನ್ (13), ಹುಸೇನ್ ತಲತ್ (3) ಮತ್ತು ನಾಯಕ ಸಲ್ಮಾನ್ ಆಘಾ (19) ನಿರ್ಗಮಿಸಿದ್ದರು. ಮೊಹಮ್ಮದ್ ಹ್ಯಾರಿಸ್ (31, 23 ಎ) ಚೇತರಿಕೆ ನೀಡಿದರು. ಮೊಹಮ್ಮದ್ ನವಾಜ್ (25, 15ಎ) ಮತ್ತು ಶಾಹಿನ್ ಶಾ ಅಫ್ರಿದಿ (19, 13ಎ) ಅವರು ಕೊನೆಗಳಿಗೆಯಲ್ಲಿ ತಂಡದ ಮೊತ್ತ 130 ದಾಟಿಸಿದರು.
ಬಾಂಗ್ಲಾ ವೇಗಿ ತಸ್ಕಿನ್ ಅಹ್ಮದ್ ಮೂರು ವಿಕೆಟ್ ಪಡೆದರೆ, ಆಫ್ ಸ್ಪಿನ್ನರ್ ಮಹೆದಿ ಹಸನ್ ಮತ್ತು ಲೆಗ್ ಸ್ಪಿನ್ನರ್ ರಿಷದ್ ಹುಸೇನ್ ತಲಾ ಎರಡು ವಿಕೆಟ್ ಪಡೆದರು. ಇದೇ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಎರಡು ಸಲ ಮಣಿಸಿತ್ತು. ಹಸ್ತಲಾಘವ ಫೈನಲ್ ಪಂದ್ಯವು ಭಾನುವಾರ ನಡೆಯಲಿದೆ.





