ದುಬೈ:ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿದೆ.41 ರನ್ಗಳ ಜಯದೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ168 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 19.3 ಓವರ್ಗಳಲ್ಲಿ
127 ರನ್ಗಳಿಗೆ ಆಲ್ ಔಟ್ ಆಯಿತು. ಬಾಂಗ್ಲಾ ಪರ ಅರ್ಧ ಶತಕ ಸಿಡಿಸಿದ ಸೈಫ್ ಹಸನ್ ಏಕಾಂಗಿ ಹೋರಾಟ ವ್ಯರ್ಥವಾಯಿತು. ಹಸನ್ 51 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ಗಳಿದ್ದ 69 ರನ್ ಗಳಿಸಿದರೆ ಫರ್ವೇಝ್ ಹೊಸೈನ್ ಎಮನ್ 21 ರನ್ ಗಳಿಸಿದರೆ ಉಳಿದ ಬ್ಯಾಟರ್ಗಳು ಎರಡಂಕಿ ದಾಟಲಿಲ್ಲ. ಭಾರತದ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ ಜಸ್ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತಕ್ಕೆ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು 6.2 ಓವರ್ಗಳಲ್ಲಿ 77 ರನ್ಗಳ ಜೊತೆಯಾಟ ಕಟ್ಟಿದರು.ಗಿಲ್ 29 ರನ್ ಗಳಿಸಿ ಔಟ್ ಆದರು. ಬಿರುಸಿನ ಆಟವಾಡಿದ ಅಭಿಷೇಕ್ ಮಗದೊಂದು ಅರ್ಧಶತಕದ ಸಾಧನೆ ಮಾಡಿದರು. ಆದರೆ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಅಭಿಷೇಕ್ 37 ಎಸೆತಗಳಲ್ಲಿ 75 ರನ್ (6 ಬೌಂಡರಿ, 5 ಸಿಕ್ಸರ್) ಗಳಿಸಿದರು.ಈ ನುಡವೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯವು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.ಶಿವಂ ದುಬೆ 2, ತಿಲಕ್ ವರ್ಮಾ 5 ಹಾಗೂ ನಾಯಕ ಸೂರ್ಯಕುಮಾರ್ ಯಾದವ್ 5 ರನ್ ಗಳಿಸಿ ಔಟ್ ಆದರು.ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 38 ರನ್ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. ಅಕ್ಷರ್ ಪಟೇಲ್ 10 ರನ್ ಗಳಿಸಿ ಔಟಾಗದೆ ಉಳಿದರು.ಬಾಂಗ್ಲಾದೇಶದ ಪರ ರಿಷಾದ್ ಹೊಸೈನ್ ಎರಡು ವಿಕೆಟ್ ಗಳಿಸಿದರು.





