ಅಬುಧಾಬಿ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ಒಮಾನ್ ತಂಡದ ವಿರಿದ್ಧ 21 ರನ್ಗಳ ಜಯ ಗಳಿಸಿತು. ಈ ಪಂದ್ಯದಲ್ಲಿ ಒಮಾನ್ ಸುಲಭದ ಸುತ್ತಾಗ ಬಹುದೆಂಬ ನಿರೀಕ್ಷೆಯಿತ್ತು. ಆದರೆ, ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ಒಮಾನ್ ತಂಡವು ನಿರೀಕ್ಷೆಗೂ ಮೀರಿ ಪ್ರತಿರೋಧ ತೋರಿ ಬೌಲಿಂಗ್, ಬ್ಯಾಟಿಂಗ್ನಲ್ಲೂ
ಉತ್ತಮ ಪ್ರದರ್ಶನ ತೋರಿತು.ಭಾರತ ತಂಡವು ಈ ಮೊದಲೇ ಸೂಪರ್ ಫೋರ್ ಹಂತಕ್ಕೆ ಸ್ಥಾನ ಕಾಯ್ದಿರಿಸಿತ್ತು. ಹೀಗಾಗಿ ಸೂರ್ಯಕುಮಾರ್ ಅವರು ಬ್ಯಾಟಿಂಗ್ಗೆ ಇಳಿಯದೆ ಉಳಿದ ಆಟಗಾರರಿಗೆ ‘ಅಭ್ಯಾಸ’ಕ್ಕೆ ಅವಕಾಶ ಮಾಡಿಕೊಟ್ಟರು. ವೇಗಿ ಜಸ್ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ವಿಶ್ರಾಂತಿ ನೀಡಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿತ್ತು. ನಾಳೆ(ಸೆ.21) ಸೂಪರ್ 4 ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಭಾರತ ನೀಡಿದ್ದ 189 ರನ್ಗಳ ಗುರಿಯನ್ನು ಬೆನ್ನಟ್ಟಿದ ಒಮಾನ್ 4 ವಿಕೆಟ್ಗೆ 167 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಮೊದಲ ವಿಕೆಟ್ಗೆ ನಾಯಕ ಜತೀಂದರ್ ಸಿಂಗ್ (32) ಮತ್ತು ಆಮಿರ್ ಕಲೀಂ(64;46ಎ) ಅವರು 56 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಜತೀಂದರ್ ಔಟಾದ ಬಳಿಕ ಕಲೀಂ ಅವರನ್ನು ಸೇರಿಕೊಂಡ ಹಮ್ಮದ್ ಮಿರ್ಜಾ (51;33ಎ) ಅವರು ವೇಗದ ಮತ್ತು ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಎರಡನೇ ವಿಕೆಟ್ಗೆ 93 (55ಎ) ಸೇರಿಸಿ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದರು. ಆದರೆ, ಬೀಸಾಟವಾಡುತ್ತಿದ್ದ ಕಲೀಂ 18ನೇ ಓವರಿನಲ್ಲಿ ಔಟಾದ ಬಳಿಕ ಪಂದ್ಯದ ಮೇಲೆ ಭಾರತ ಮರಳಿ ಹಿಡಿತ ಸಾಧಿಸಿತು.
ಇದಕ್ಕೂ ಮೊದಲು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (56, 45ಎ) ತಮಗೆ ದೊರೆತ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡು ಅರ್ಧ ಶತಕ ಬಾರಿಸಿದರು. ಹೀಗಾಗಿ, ಭಾರತ 8 ವಿಕೆಟ್ಗೆ 188 ರನ್ ಗಳಿಸಿತು.ಉಪನಾಯಕ ಶುಭಮನ್ ಗಿಲ್(5) ಬೇಗನೇ ನಿರ್ಗಮಿಸಿದರು. ಈ ಟೂರ್ನಿಯಲ್ಲಿ ಮೊದಲ ಬಾರಿ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದ ಸಂಜು ತಮ್ಮ ಎಂದಿನ ಲಹರಿಯಲ್ಲಿ ಆಡದಿದ್ದರೂ ಉಪಯುಕ್ತ ಕಾಣಿಕೆ ನೀಡಿ ದರು. ಕೊಂಚ ಮಂದಗತಿಯ ಪಿಚ್ನಲ್ಲಿ ವಿಶ್ವಾಸದಿಂದ ಆಡಿ ತಲಾ ಮೂರು ಬೌಂಡರಿ, ಸಿಕ್ಸರ್ಗಳನ್ನು ಬಾರಿಸಿದರು.
ಅಭಿಷೇಕ್ ಶರ್ಮಾ (38, 15ಎ, 4×5, 6×2) ಎಂದಿನ ರೀತಿಯಲ್ಲಿ ಬೀಸಾಟವಾಡಿದರು.ಅಭಿಷೇಕ್–ಸಂಜು ಎರಡನೇ ವಿಕೆಟ್ಗೆ 66 ರನ್ ಜತೆಯಾಟ ಆಡಿದರು.ಏಳನೇ ಕ್ರಮಾಂಕದಲ್ಲಿ ಆಡಿದ ತಿಲಕ್ ವರ್ಮಾ (29, 18ಎ), ಅಕ್ಷರ್ ಪಟೇಲ್ (26.13 ಎಸೆತ) ಕೂಡ ವೇಗವಾಗಿ ರನ್ ಗಳಿಸಿದರು. ಒಮಾನ್ ವೇಗಿಗಳಾದ ಶಾ ಫೈಸಲ್, ಜಿತೆನ್ ರಾಮನಂದಿ, ಎಡಗೈ ಸ್ಪಿನ್ನರ್ ಅಮೀರ್ ಕಲೀಮ್ ಅವರು ತಲಾ ಎರಡು ವಿಕೆಟ್ಗಳನ್ನು ಪಡೆದು ಭಾರತ ನಾಗಾಲೋಟದಲ್ಲಿ ಸಾಗದಂತೆ ಕಡಿವಾಣ ಹಾಕಿದರು.





