ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದೆ.ಈ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡಗಳು ಸತತ ಮೂರನೇ ಭಾನುವಾರ ಹಣಾಹಣಿ ನಡೆಸಲಿವೆ.ಟೂರ್ನಿಯಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಶುಕ್ರವಾರ ತಡರಾತ್ರಿ ಸೂಪರ್ ಫೋರ್ ಪಂದ್ಯದಲ್ಲಿ
ಶ್ರೀಲಂಕಾ ಎದುರು ‘ಸೂಪರ್ ಓವರ್’ನಲ್ಲಿ ಜಯಿಸಿತ್ತು.ಭಾರತ ತಂಡ ಈ ಟೂರ್ನಿಯಲ್ಲಿ 6–0 ಗೆಲುವಿನ ಮುನ್ನಡೆ ಹೊಂದಿದೆ. ಅಭಿಷೇಕ್ ಸ್ಫೋಟಕ ಶೈಲಿ ಬ್ಯಾಟಿಂಗ್ನಿಂದಾಗಿ ತಂಡವು ಪವರ್ ಪ್ಲೇ ಹಂತಗಳಲ್ಲಿ ರನ್ ಸೂರೆ ಮಾಡಿದೆ. ಎಡಗೈ ಬ್ಯಾಟರ್ ಅಭಿಷೇಕ್ ಒಟ್ಟು 309 ರನ್ ಗಳಿಸಿದ್ದಾರೆ. ಅದರಲ್ಲಿ ಮೂರು ಭರ್ಜರಿ ಅರ್ಧಶತಕಗಳು ಸೇರಿವೆ. ಅವರ ಆರಂಭಿಕ ಜೊತೆಗಾರ ಮತ್ತು ಉಪನಾಯಕ ಶುಭಮನ್ ಗಿಲ್ ಹಾಗೂ ನಾಯಕ ಸೂರ್ಯ ಅವರೂ ಲಯಕ್ಕೆ ಮರಳಬೇಕಿದೆ. ಬುಮ್ರಾ ಅವರು ಮರಳುವುದು ತಂಡದ ಬೌಲಿಂಗ್ ವಿಭಾಗ ಗಟ್ಟಿಗೊಳಿಸಲಿದೆ.
ಟೂರ್ನಿಯ ಕಳೆದೆರಡೂ ಹಣಾಹಣಿ ಗಳಲ್ಲಿ ಭಾರತವು ಪಾಕ್ ವಿರುದ್ಧ ಮೇಲುಗೈ ಸಾಧಿಸಿ ಗೆಲುವು ಸಾಧಿಸಿದೆ. ಇದೀಗ ‘ಹ್ಯಾಟ್ರಿಕ್’ ಜಯದೊಂದಿಗೆ ಟ್ರೋಫಿಗೆ ಮುತ್ತಿಡಲು ಕಾತರಿಸಿದೆ.
ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸೋನಿ ಸ್ಪೋರ್ಟ್ಸ್.





