ಕೋಯಿಕ್ಕೋಡ್:ಅಂಕೋಲದ ಶಿರೂರು ಭೂಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಮೃದೇಹದ ಅಂತ್ಯಕ್ರಿಯೆ ಅವರ ಹುಟ್ಟೂರಾದ ಕೋಯಿಕ್ಕೋಡ್ ಜಿಲ್ಲೆಯ ಕಣ್ಣಾಡಿಕಲ್ ಗ್ರಾಮದಲ್ಲಿ ನಡೆಯಿತು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.ಭೂಕುಸಿತದಲ್ಲಿ ಗಂಗಾವಳಿ ನದಿಯಲ್ಲಿ ಸಿಲುಕಿ ಕಾಣೆಯಾಗಿದ್ದ
ಲಾರಿ ಮತ್ತು ಅರ್ಜುನ್ ಮೃತದೇಹ ಗಂಗಾವಳಿ ನದಿಯಲ್ಲಿ ಎರಡು ದಿನಗಳ ಹಿಂದೆ ಪತ್ತೆಯಾಗಿತ್ತು. ಡಿಎನ್ಎ ಪರೀಕ್ಷೆ, ಪೋಸ್ಟ್ಮಾರ್ಟ್ಂ ಮತ್ತಿತರ ಪ್ರಕ್ರಿಯೆ ಪೂರ್ತಿಯಾದ ಬಳಿಕ ನಿನ್ನೆ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿತ್ತು. ನಿನ್ನೆ ರಾತ್ರಿ ಹೊರಟ ಅರ್ಜುನ್ ಮೃತದೇಹ ಹೊತ್ತ ಆಂಬುಲೆನ್ಸ್ ಇಂದು ಬೆಳಿಗ್ಗೆ ಕಣ್ಣಾಡಿಕ್ಕಲ್ ತಲುಪಿತು. ಅರ್ಜುನ್ ಪಾರ್ಥಿವ ಶರೀರ ಬಂದಾಗ ಅಂತಿಮ ನಮನ ಸಲ್ಲಿಸಲು ನಾನಾ ದಿಕ್ಕುಗಳಿಂದ ಜನ ಸಾಗರವೇ ಹರಿದು ಬಂದಿತು.ಕಣ್ಣೀರ ಕೋಡಿಯೇ ಹರಿಯಿತು.ಅಂತಿಮ ದರ್ಶನಕ್ಕೆ ಕಿಲೋಮೀಟರ್ ದೂರದಲ್ಲಿ ಸರತಿ ಸಾಲು ಕಂಡು ಬಂದಿತು. ಕುಟುಂಬ ಸದಸ್ಯರ ದುಃಖದ ಕಟ್ಟೆ ಒಡೆದಿತ್ತು.ಗೆಳೆಯರು ನೆರೆದ ಸಾವಿರಾರು ಮಂದಿಯ ಕಣ್ಣೀರ ಧಾರೆಯ
ಮಧ್ಯೆ ಮಧ್ಯಾಹ್ನದ ವೇಳೆಗೆ ಅರ್ಜುನ್ ಅಂತ್ಯಕ್ರಿಯೆ ನಡೆಯಿತು. ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದ ಕಾರವಾರ ಶಾಸಕರಾದ ಸತೀಶ್ ಕೃಷ್ಣ ಸೈಲ್, ಮುಳುಗು ತಜ್ಞ ಈಶ್ವರ ಮಲ್ಪೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಕೇರಳ ಸಚಿವ ಎ.ಕೆ.ಶಶೀಂದ್ರನ್, ಎಂ.ಕೆ.ರಾಘವನ್ ಎಂಪಿ, ಮಂಜೇಶ್ವರದ ಶಾಸಕ ಎ.ಕೆ.ಎಂ ಅಶ್ರಫ್ ಸೇರಿದಂತೆ ಶಾಶಕರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು. ಕರ್ನಾಟಕ ಸರಕಾರ ನೀಡಿದ 5 ಲಕ್ಷ ಮೊತ್ತದ ಪರಿಹಾರ ಚೆಕ್ಕನ್ನು ಶಾಸಕರಾದ ಸತೀಶ್ ಸೈಲ್ ಅವರು ಅರ್ಜುನ್ ಕುಟುಂಬಕ್ಕೆ ಹಸ್ತಾಂತರ ಮಾಡಿದರು.